ಆಮ್ಸ್ಟೆಲ್ವೀನ್: ಇಂಗ್ಲೆಂಡ್ ತಂಡ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಇತಿಹಾಸ ಬರೆದಿದೆ.
ನೆದರ್ಲೆಂಡ್ ತಂಡದ ವಿರುದ್ಧ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 4 ವಿಕೆಟ್ ನಷ್ಟಕ್ಕೆ 498 ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಇನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮುರಿದಿದ್ದು, ವಿಶ್ವದಾಖಲೆ ಬರೆದಿದೆ. ಈ ಮೂಲಕ ಇಂಗ್ಲೆಂಡ್ ತಂಡ 2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಥಾಪಿಸಿದ್ದ ದಾಖಲೆಯನ್ನು ಉತ್ತಮ ಪಡಿಸಿಕೊಂಡಿದೆ.
ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ನಷ್ಟಕ್ಕೆ 481 ರನ್ ಗಳಿಸಿತ್ತು. ಇನ್ನು ಇಂಗ್ಲೆಂಡ್ ತಂಡ ಪಾಕಿಸ್ತಾನದ ವಿರುದ್ಧ 2016 ರಲ್ಲಿ 3 ವಿಕೆಟ್ ನಷ್ಟಕ್ಕೆ 444 ರನ್ ಗಳಿಸಿತ್ತು. ಈ ಮೂಲಕ ಅತಿಹೆಚ್ಚು ರನ್ ಗಳಿಸಿದ ತಂಡಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನದಲ್ಲಿ ಇಂಗ್ಲೆಂಡ್ ತಂಡವೇ ಇದೆ.
NEW WORLD RECORD!! 😱
WATCH LIVE: https://t.co/2QHEXI08dI#NEDvENG pic.twitter.com/OD6Zz587sY
— England Cricket (@englandcricket) June 17, 2022
ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಫಿಲಿಪ್ ಸಾಲ್ಟ್ 122, ಡೇವಿಡ್ ಮಲಾನ್ 125 ಹಾಗೂ ಜೋಸ್ ಬಟ್ಲರ್ 162 ಭರ್ಜರಿ ಶತಕ ದಾಖಲಿಸಿದರು. ಇನ್ನು ಲೀವಿಂಗ್ ಸ್ಟೋನ್ 66 ರನ್ ಗಳಿಸಿ ಮಿಂಚಿದರು.
ಇಂಗ್ಲೆಂಡ್ ಮತ್ತು ನೆದರ್ಲೆಂಡ್ ತಂಡಗಳು ಐಸಿಸಿ ಟೂರ್ನಿಗಳ ಹೊರತಾಗಿ ದ್ವಿಪಕ್ಷೀಯ ಸರಣಿಯಲ್ಲಿ ಆಡಿರಲಿಲ್ಲ. ಇದೇ ಮೊದಲ ಬಾರಿಗೆ ದ್ವಿಪಕ್ಷೀಯ ಸರಣಿಯಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿವೆ. ಇನ್ನು ನೆದರ್ಲೆಂಡ್ ತಂಡ ಟಿ20 ವಿಶ್ವಕಪ್ ನಲ್ಲಿ 2 ಬಾರಿ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿದೆ.