ಬೆಂಗಳೂರು: ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆಗಳನ್ನು ಮುಂದೂಡುವಂತೆ ರಾಜೀವ್ ಗಾಂಧಿ ಅರೋಗ್ಯ ವಿಶ್ವವಿದ್ಯಾಲಯಕ್ಕೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಪತ್ರ ಬರೆದಿದ್ದಾರೆ.
ಫೆಬ್ರವರಿ 22 ರಿಂದ ರಾಜೀವ್ ಗಾಂಧಿ ಆರೋಗ್ಯ ವಿವಿಯ ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆಗಳು ಆರಂಭವಾಗಬೇಕಿತ್ತು. ಆದರೆ ರಾಜ್ಯದ ಎಂಬಿಬಿಎಸ್ ವಿದ್ಯಾರ್ಥಿಗಳ ಮನವಿ ಮೇರೆಗೆ ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆಗಳನ್ನು ಮುಂದೂಡಿ, ವಿದ್ಯಾರ್ಥಿಗಳಿಗೆ ಸಿದ್ಧತೆ ನಡೆಸಲು ಸೂಕ್ತ ಕಾಲಾವಕಾಶ ಒದಗಿಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸುವಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಉಪಕುಲಪತಿಗಳಿಗೆ ಪತ್ರ ಬರೆದಿದ್ದೇನೆ ಎಂದು ಸುಧಾಕರ್ ಅವರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ರಾಜ್ಯದ ಎಂಬಿಬಿಎಸ್ ವಿದ್ಯಾರ್ಥಿಗಳ ಮನವಿ ಮೇರೆಗೆ ಫೆಬ್ರವರಿ 22 ರಿಂದ ನಡೆಯಬೇಕಿರುವ ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆಗಳನ್ನು ಮುಂದೂಡಿ, ವಿದ್ಯಾರ್ಥಿಗಳಿಗೆ ಸಿದ್ಧತೆ ನಡೆಸಲು ಸೂಕ್ತ ಕಾಲಾವಕಾಶ ಒದಗಿಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸುವಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಉಪಕುಲಪತಿಗಳಿಗೆ ಪತ್ರ ಬರೆದಿದ್ದೇನೆ.@VCRguhs https://t.co/E9tVB8ORDP
— Dr Sudhakar K (@mla_sudhakar) February 1, 2022
ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗಿದ್ದು ಮೇ ತಿಂಗಳಿನಲ್ಲಿ, ಜುಲೈ ತಿಂಗಳವರೆಗೂ ಕೋವಿಡ್ ಹಿನ್ನೆಲೆ ಆನ್ ಲೈನ್ ಪಾಠ ಆಗಿದೆ. ಅಗತ್ಯವಿದ್ದಷ್ಟು ಕ್ಲಿನಿಕಲ್ ಪೋಸ್ಟಿಂಗ್ ಸಹ ಆಗಿರುವುದಿಲ್ಲ. ಅಂತಿಮ ವರ್ಷದ ವಿದ್ಯಾರ್ಥಿಗಳು 2 ತಿಂಗಳು ಕೋವಿಡ್ ಕರ್ತವ್ಯ ನಿರ್ವಹಿಸಿದ್ದಾರೆ. ಮತ್ತೆ ಮೂರನೇ ಅಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶೈಕ್ಷಣಿಕ ವೇಳಾಪಟ್ಟಿ ಕುಸಿದು, ಪರೀಕ್ಷಾ ತಯಾರಿಗೆ ಸಮಯ ಕಡಿಮೆಯಾಗಿದೆ. ಅಚ್ಚುಕಟ್ಟಾಗಿ ಅಂತಿಮ ವರ್ಷದ ಪರೀಕ್ಷೆಗೆ ತಯಾರಾಗಲು ಸಮಯಾವಕಾಶದ ಅಗತ್ಯವಿದೆ ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸುಧಾಕರ್ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ಧಾರೆ.