ಉಡುಪಿ: ಪ್ರಮೋದ್ ಮಧ್ವರಾಜ್ ಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಕೊಟ್ಟಿತ್ತು, ಮುಂದಿನ ದಿನಗಳಲ್ಲಿ ಅವರು ಪಶ್ಚಾತ್ತಾಪ ಪಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದ ಪ್ರಮೋದ್ ವಿಚಾರದ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಅವರು ಪ್ರಮೋದ್ ಮಧ್ಚರಾಜ್ ಪಕ್ಷ ಬಿಟ್ಟರೂ ಕಾರ್ಯಕರ್ತರು ಜಗ್ಗಲಿಲ್ಲ, ಉಡುಪಿ ಕಾಂಗ್ರೆಸ್ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ರಾಜ್ಯ ಕಾಂಗ್ರೆಸ್ ಕಾರ್ಯಕರ್ತರ ಜೊತೆಗಿದೆ. ಮುಂದೆ ಯಾರನ್ನು ಚುನಾವಣಾ ಕಣಕ್ಕೆ ಇಳಿಸಲಿದೆ ಎಂದು ಶೀಘ್ರದಲ್ಲೇ ಗೊತ್ತಾಗುತ್ತೆ. ನಾಯಕರು ನನಗೆ ಪ್ರಪೋಸಲ್ ನೀಡಲಿದ್ದಾರೆ. ನಾವೆಲ್ಲ ಕೂತು ಉಡುಪಿ ವಿಧಾನಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ನಿರ್ಧರಿಸಲಿದ್ದೇವೆ ಎಂದು ತಿಳಿಸಿದ್ಧಾರೆ.
ಇದನ್ನೂ ಓದಿ: ನಾನು ಮತ್ತು ಜಿ.ಟಿ. ದೇವಗೌಡ ಮಾತ್ರ ನನಗೆ ಲೆಕ್ಕ… ಡಿ.ಕೆ. ಶಿವಕುಮಾರ್…
ಇನ್ನು ಪ್ರಮೋದ್ ಮಧ್ಚರಾಜ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದೆ. ಮುಂದಿನ ದಿನದಲ್ಲಿ ಪ್ರಮೋದ್ ಪಶ್ಚಾತ್ತಾಪ ಪಡುತ್ತಾರೆ. ಪ್ರಮೋದ್ ಹಾಗೂ ಅವರ ಕುಟುಂಬಕ್ಕೆ ಪಕ್ಷ ಎಲ್ಲವನ್ನ ಕೊಟ್ಟಿತ್ತು, ಪ್ರಮೋದ್ ನನ್ನ ಪಕ್ಕದಲ್ಲಿ ಕುಳಿತುಕೊಳ್ತಿದ್ರು ಈಗ ಕೆಳಗೆ ಕುಳಿತುಕೊಳ್ಳುವಂತಾಗಿದೆ. ಫೋಟೋಗಳನ್ನ ನೋಡಿ ಬೇಸರವಾಯಿತು. ಆದಷ್ಟು ಬೇಗ ಪ್ರಮೋದ್ ಪಶ್ಚಾತ್ತಾಪ ಪಡುತ್ತಾರೆ. ನಮ್ಮ ಪಕ್ಷದ ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ. ಬಹಳಷ್ಟು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಲಿದ್ದಾರೆ, ಮುಂದೆ ವಿಶೇಷ ಮೆಂಬರ್ ಶಿಪ್ ಡ್ರೈವ್ ಉಡುಪಿ ಜಿಲ್ಲೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ ಕೊಡ್ತಿದ್ದೇವೆ, ಉದ್ಯೋಗ ಸೃಷ್ಡಿಗೆ ಕಾರ್ಯಕ್ರಮ ರೂಪಿಸ್ತಿದ್ದೇವೆ. ಜನರು ವಲಸೆ ಹೋಗುವುದನ್ನು ತಡೆಯಬೇಕಿದೆ. ಕರಾವಳಿಯ ಯುವಕರು ಕೆಲಸ ಕೊಡುವವರು ಹೊರತು ಬೇರೆಯವರ ಕೆಳಗೆ ಕೆಲಸ ಮಾಡುವವರಲ್ಲ. ಹೀಗಾಗಿ ಉದ್ಯೋಗ ಸೃಷ್ಟಿ ಮಾಡಲು ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಾನು ತಪ್ಪು ಮಾಡಿದ್ರೆ, ಆ ತಪ್ಪಿನ ಶಿಕ್ಷೆ ಅನುಭವಿಸಲು ಬದ್ದನಾಗಿದ್ದೇನೆ : ಡಿ. ಕೆ. ಶಿವಕುಮಾರ್…