7 ವರ್ಷಗಳ ಹಿಂದೆ ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ಸುನಂದಾ ಪುಷ್ಕರ್ ಸಾವು ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ದೆಹಲಿಯ ವಿಶೇಷ ನ್ಯಾಯಾಲಯ ತರೂರ್ ರನ್ನು ಆರೋಪಮುಕ್ತ ಗೊಳಿಸಿದೆ.
2014ರ ಜನವರಿ 17 ರಂದು ದೆಹಲಿಯ ಪಂಚತಾರಾ ಹೋಟೆಲ್ ನಲ್ಲಿ ಸುನಂದಾ ಪುಷ್ಕರ್ ಅವರ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ದೆಹಲಿ ಪೊಲೀಸರು ಮಾಜಿ ಕೇಂದ್ರ ಸಚಿವ ಶಶಿ ತರೂರ್ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ ನೀಡುವುದು) ಮತ್ತು 498-ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ಕಳೆದ ಏಳುವರೆ ವರ್ಷಗಳಿಂದ ದೆಹಲಿಯ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಇತ್ತೀಚೆಗೆ ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯೆಲ್ ಅವರು ತೀರ್ಪನ್ನು ಕಾಯ್ದಿರಿಸಿದ್ದರು. ಇಂದು ತೀರ್ಪು ಪ್ರಕಟಿಸಿದ ಅವರು ಶಶಿ ತರೂರ್ ಅವರನ್ನು ದೋಷಮುಕ್ತಗೊಳಿಸಿದ್ದಾರೆ.
ಪ್ರಕರಣದ ವಿಚಾರಣೆ ವೇಳೆ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ಅವರು ‘ಸುನಂದಾ ಪುಷ್ಕರ್ ಅವರು ಸಾವು ಸಹಜವಾದುದಲ್ಲ. ಅವರು ವಿಷಪ್ರಾಶನದಿಂದ ಮೃತಪಟ್ಟಿರುವುದು ಪೋಸ್ಟ್ ಮಾರ್ಟಮ್ ವರದಿಯಿಂದ ದೃಢಪಟ್ಟಿದೆ. ಸುನಂದಾ ಪುಷ್ಕರ್ ಅವರಿಗೆ ಮಾನಸಿಕ ಹಿಂಸೆ ನೀಡಲಾಗಿದೆ. ಹಾಗಾಗಿ ಅವರ ಆರೋಗ್ಯ ಹದಗೆಟ್ಟಿತ್ತು. ಅವರಿಗೆ ಇದಕ್ಕೂ ಮುನ್ನ ಯಾವುದೇ ಆರೋಗ್ಯದ ಸಮಸ್ಯೆಗಳು ಇರಲಿಲ್ಲ ಎಂದು ವಾದ ಮಂಡಿಸಿದ್ದರು.
ಶಶಿ ತರೂರ್ ಪರ ವಕೀಲರು ‘ಸುನಂದಾ ಪುಷ್ಕರ್ ಅವರಿಗೆ ವಿಷ ಪ್ರಾಶನ ಮಾಡಿಸಲಾಗಿದೆ ಎಂಬುದನ್ನು ಸಾಬೀತು ಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಜೊತೆಗೆ ಸುನಂದಾ ಪುಷ್ಕರ್ ಅವರ ಪುತ್ರನ ಹೇಳಿಕೆಯನ್ನು ಉಲ್ಲೇಖಿಸಿ ವಾದ ಮಂಡಿಸಿದ್ದರು. ಈ ಹೇಳಿಕೆಯಲ್ಲಿ ಸುನಂದಾ ಪುಷ್ಕರ್ ಪುತ್ರ ‘ತಾನು ಏಮ್ಸ್ ವೈದ್ಯರ ಬಳಿ ವಿಚಾರಿಸಿದಾಗ ಪೋಸ್ಟ್ ಮಾರ್ಟಮ್ ನಲ್ಲಿ ಸುನಂದಾ ಅವರಿಗೆ ವಿಷ ಪ್ರಾಶನ ಮಾಡಿರುವುದು ಕಂಡು ಬಂದಿಲ್ಲ ಎಂದು ತಿಳಿಸಿದ್ದರು. ಆದರೆ ಅದೇ ವೈದ್ಯರು ಬಳಿಕ ಮಾಧ್ಯಮಗಳ ಮುಂದೆ ವಿಷ ಸೇವನೆಯಿಂದ ಸಾವು ಸಂಭವಿಸಿದೆ ಎಂದು ಹೇಳಿರುವುದಾಗಿ ತಮ್ಮ ಹೇಳಿಕೆಯಲ್ಲಿ ದಾಖಲಿಸಿದ್ದರು’.
ತೀರ್ಪು ಪ್ರಕಟವಾಗುತ್ತಿದ್ದಂತೆ ಈ ಕುರಿತು ಶಶಿ ತರೂರ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ಇಂದು ಕಳೆದ ಏಳುವರೆ ವರ್ಷಗಳ ಮಾನಸಿಕ ಹಿಂಸೆಯಿಂದ ಮುಕ್ತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.
— Shashi Tharoor (@ShashiTharoor) August 18, 2021