ನೆಲಮಂಗಲ: ಕಾಲೇಜಿಗೆ ಬರುವ ವೇಳೆ ಪೋಲಿ ಪುಂಡರ ಹಾವಳಿ ದಿನೇದಿನೇ ಹೆಚ್ಚುತ್ತಿದೆ, ಅವರ ಹಾವಳಿಯನ್ನು ತಪ್ಪಿಸಿ ಎಂದು ನೂರಾರು ವಿದ್ಯಾರ್ಥಿಗಳು ನೆಲಮಂಗಲ ಶಾಸಕ ಶ್ರೀನಿವಾಸ ಮೂರ್ತಿಗೆ ಮುತ್ತಿಗೆ ಹಾಕಿ ಮನವಿ ಪತ್ರ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಸೊಂಡೆಕೊಪ್ಪ ರಸ್ತೆಯ ಪವಾಡ ಬಸವಣ್ಣ ದೇವರ ಮಠದ ನೂರಾರು ವಿದ್ಯಾರ್ಥಿನಿಯರಿಂದ ಇಂದು ಶಾಸಕರಿಗೆ ಮನವಿ ಪತ್ರ ನೀಡಿದರು. ನೆಲಮಂಗಲ ನಗರಸಭೆ ವ್ಯಾಪ್ತಿಯ ಸೊಂಡೆಕೊಪ್ಪ ರಸ್ತೆಯ ಎರಡೂ ಬದಿಯಲ್ಲೂ ಅನಧಿಕೃತ ಅಂಗಡಿಗಳು ಹಾಗೂ ಶೆಡ್ ಗಳು ನಿರ್ಮಾಣವಾಗಿವೆ. ಇದರಿಂದಾಗಿ ಸೊಂಡೆಕೊಪ್ಪ ರಸ್ತೆಯಲ್ಲಿ ವೃದ್ಧರು, ಹೆಣ್ಣು ಮಕ್ಕಳು ಓಡಾಡುವುದೇ ದುಸ್ತರವಾಗಿದೆ. ಜೊತೆಗೆ ರಸ್ತೆಯ ಎರಡು ಬದಿಯಲ್ಲಿ ಅಂಗಡಿ ಮುಂಗಟ್ಟು ಇರುವುದರಿಂದ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳಲು ಹರ ಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳು, ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಹೀಗಾಗಿ ಇಂದು ವಿದ್ಯಾರ್ಥಿಗಳು ಶಾಸಕ ಶ್ರೀನಿವಾಸಮೂರ್ತಿ ಬಳಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಶಾಸಕರು ಕೂಡಲೇ ಸಮಸ್ಯೆ ಬಗೆ ಹರಿಸುವುದಾಗಿ ತಿಳಿಸಿದ್ಧಾರೆ.
ಸ್ಥಳ: ನೆಲಮಂಗಲ
ವರದಿ: ಮಂಜುನಾಥ್. ಜಿ