ಚಿತ್ರದುರ್ಗ: ಕೋಟೆನಾಡಲ್ಲಿ ಕಳ್ಳರ ಹಾವಳಿ ಹೆಚ್ಚುತ್ತಿದ್ದು, ದಿನೇ ದಿನೇ ಕಳ್ಳತನ ಪ್ರಕರಣ ಜಾಸ್ತಿಯಾಗುತ್ತಿದೆ. ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ನಿರಂತರ ಕಳ್ಳತನ ನಡೆಯುತ್ತಿದ್ದು, ದುರ್ಗದಲ್ಲಿ ಕಳ್ಳರ ಒಂದು ಟೀಂ ಆ್ಯಕ್ಟಿವ್ ಇದೆ.
ಒಂಟಿ ಮನೆ, ಒಂಟಿ ಮಹಿಳೆಯರು, ದೇವಸ್ಥಾನದ ಹುಂಡಿ, ಮನೆ ಮುಂಭಾಗದ ಬೈಕ್, ಕಾರ್ ಇವರ ಟಾರ್ಗೆಟ್ ಆಗಿದ್ದು, ಕಳೆದ ಒಂದು ತಿಂಗಳಲ್ಲಿ ಚಿತ್ರದುರ್ಗ ನಗರದ ಹತ್ತಕ್ಕೂ ಹೆಚ್ಚು ಮನೆಗಳನ್ನು ಕಳ್ಳರು ದೋಚಿದ್ದಾರೆ. ನಗರದ ಬ್ಯಾಂಕ್ ಕಾಲೋನಿ, ಧವಳಗಿರಿ ಬಡಾವಣೆ, IUDP ಲೇ ಔಟ್ ಸೇರಿ ಹಲವೆಡೆ ಕಳ್ಳತನ ನಡೆಯುತ್ತಿದ್ದು, ಕಳ್ಳರ ಉಪಟಳಕ್ಕೆ ಚಿತ್ರದುರ್ಗ ಜನರಲ್ಲಿ ಆತಂಕ ಹೆಚ್ಚಾಗಿದೆ. ಮೊನ್ನೆ ಚಳ್ಳಕೆರೆ ನಗರದ ಚಳ್ಳಕೆರಮ್ಮ ದೇಗುಲದ ಹುಂಡಿ ಕಳವಾಗಿದ್ದು, ನಿನ್ನೆ ಪೊಲೀಸ್ ಠಾಣೆ ಪಕ್ಕದ ಮೊಬೈಲ್ ಅಂಗಡಿಯನ್ನೇ ಕಳ್ಳರು ದೋಚಿದ್ದಾರೆ.
ಇನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳ್ಳ ಕೈಚಳಕ ತೋರಿಸಿದ್ದು, ರೋಗಿಯ ನೆಪದಲ್ಲಿ ಬೆಡ್ ಮೇಲೆ ಮಲಗಿ ಮೊಬೈಲ್ ಕದ್ದು ಪರಾರಿಯಾಗಿದ್ದಾನೆ. ಪಕ್ಕದಲ್ಲೇ ಮಲಗಿದ್ದ ಯೋಗೀಶ್ ಎಂಬುವವರ ಮೊಬೈಲ್ ಅನ್ನು ಕಳ್ಳ ಕದ್ದಿದ್ದು, ಎಲ್ಲರೂ ಮಲಗಿದ್ದ ವೇಳೆ ಬೆಳಗಿನ ಜಾವ ಮೊಬೈಲ್ ಕದ್ದು ಪರಾರಿಯಾಗಿದ್ದಾನೆ. ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹಿರಿಯೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಇಲಾಖೆಗೆ ಕಳ್ಳರನ್ನ ಬಂಧಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: #Flashnews ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ…! ಕಾರಿನ ಏರ್ ಬ್ಯಾಗ್ ಓಪನ್… ಬದುಕುಳಿದ ಜೀವ…!