ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ಸಮಾಧಿಗೂ ಸೂಕ್ತ ಭದ್ರತೆ ಇಲ್ಲದಂತಾಗಿದ್ದು, ನಿಧಿ ಸಿಗುವ ಆಸೆಗೆ ನೂರಾರು ವರ್ಷಗಳ ಇತಿಹಾಸವಿರುವ ರಾಜ ಓಬಣ್ಣ ನಾಯಕರ ಸಮಾಧಿ ಸ್ಮಾರಕವನ್ನ ಕೆಲ ಕಿಡಿಗೇಡಿಗಳು ನಾಶಗೊಳಿಸಿದ್ದಾರೆ. ಈ ವಿಚಾರವನ್ನ ಕೇಳಿದ ದುರ್ಗದ ಜನ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.
16ನೇ ಶತಮಾನದಲ್ಲಿ ಚಿನ್ಮೂಲಾದ್ರಿ ಸಂಸ್ಥಾನದಲ್ಲಿ ಆಳ್ವಿಕೆ ನಡೆಸಿದ ರಾಜ ಓಬಣ್ಣ ನಾಯಕ, ರೈತಪರ, ಜನಪರ ಕೆಲಸ ಮಾಡಿದ್ದು, ಇವರನ್ನ ಹಳಿಯೂರು ಬಳಿಯ ಸರ್ವೆ ನಂ 105/2 ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಇತ್ತೀಚೆಗೆ ಸಮಾಧಿ ಇದ್ದ ಜಮೀನನ್ನು ಮಾಜಿ ನಗರಸಭೆ ಸದಸ್ಯೆ ರುದ್ರಾಣಿ ಗಂಗಾಧರ್ ಖರೀದಿಸಿದ್ದರು. ಶಿಲ್ಪ ಕಲೆಯುಳ್ಳ ಕಲ್ಲುಗಳಿಂದ ನಿರ್ಮಾಣವಾಗಿದ್ದ ರಾಜರ ಸಮಾಧಿ ಎಲ್ಲೆಂದರಲ್ಲಿ ಎಸೆಯಲಾಗಿದ್ದು, ಒಬಣ್ಣ ನಾಯಕರ ಸಮಾಧಿ ಸ್ಮಾರಕವನ್ನ ಸಂಪೂರ್ಣನಾಶ ಮಾಡಿದ್ದಾರೆ.
ಇನ್ನೂ ಈ ಕೃತ್ಯದ ಬಗ್ಗೆ ಚಿತ್ರನಾಯಕ ವೇದಿಕೆಯ ಅಧ್ಯಕ್ಷರಾದ ಪ್ರಶಾಂತ್ ತೀವ್ರ ಆಕ್ರೋಷ ಹೊರ ಹಾಕುತ್ತಿದ್ದು, ರಾಜರ ಸಮಾಧಿ ಆಗಿರುವ ಕಾರಣ ನಿಧಿ ಸಿಗುವ ಆಸೆಯಿಂದಲೇ ಈ ಕೃತ್ಯವೆಸಗಿದ್ದಾರೆ. ಹೀಗಾಗಿ, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜರ ಸಮಾಧಿಯನ್ನು ಪುನರ್ ನಿರ್ಮಾಣ ಮಾಡುವವರೆಗೆ ಹೋರಾಟ ನಡೆಸುತ್ತೇವೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ಯುಪಿಎಸ್ ಸಿ ಫಲಿತಾಂಶ ಪ್ರಕಟ… ರಾಜ್ಯದ ಅಕ್ಷಯ್ ಸಿಂಹಗೆ 77 ನೇ ರ್‍ಯಾಂಕ್