ಬೆಂಗಳೂರು : ವಿಜಯಾನಂದ ಕನ್ನಡದ ಮೊದಲ ಬಯೋಪಿಕ್ ಸಿನಿಮಾ ಪ್ಯಾನ್ ಇಂಡಿಯಾದಲ್ಲಿ ರಾರಾಜಿಸುತ್ತಿದೆ.. ಅರೇ ಇದು ಯಾರ ಬಯೋಪಿಕ್ ಗೊತ್ತಾ.. ದೊಡ್ಡ ಅಚ್ಯೂವರ್.. ಪದ್ಮಭೂಷಣ ಪ್ರಶಸ್ತಿ ಪಡೆದ ಸಾಧಕ. ಕೋಟ್ಯಾಂತರ ಮಂದಿಗೆ ಸ್ಪೂರ್ತಿಯ ಚಿಲುಮೆ.. ಹೆಮ್ಮೆಯ ಕನ್ನಡಿಗ ವಿಜಯ್ ಸಂಕೇಶ್ವರ್ ಅವರದ್ದು..
ಚಿತ್ರ: ವಿಜಯಾನಂದ
ನಿರ್ಮಾಣ: ಆನಂದ್ ಸಂಕೇಶ್ವರ್
ನಿರ್ದೇಶನ: ರಿಶಿಕಾ ಶರ್ಮಾ
ಪಾತ್ರವರ್ಗ: ಅನಂತ್ ನಾಗ್, ರವಿಚಂದ್ರನ್, ನಿಹಾಲ್, ಸಿರಿ ಪ್ರಹ್ಲಾದ್ ಭರತ್ ಬೋಪಣ್ಣ, ಶೈನ್ ಶೆಟ್ಟಿ ದಯಾಳ್ ಪದ್ಮನಾಭನ್ ಮುಂತಾದವರು.
ಮಾರ್ಕ್ಸ್: 3.5/5
ರೇಟಿಂಗ್ :
ಕಷ್ಟದಿಂದ ಕಷ್ಟಪಟ್ಟು ಕೆಲಸವನ್ನ ಆರಂಭಸಿ ದೊಡ್ಡ ಉದ್ಯಮ ಕಟ್ಟಿದ ಕೆಲವೇ ಕರ್ನಾಟಕದ ಯಶಸ್ವಿ ಉದ್ಯಮಿಗಳಲ್ಲೊಬ್ಬರು ವಿಜಯ್ ಸಂಕೇಶ್ವರ್. 45 ವರ್ಷಗಳ ಹಿಂದೆ ಕೇವಲ ಒಂದು ಟ್ರಕ್ನಿಂದ ಶುರು ಮಾಡಿ ಇವತ್ತು ಭಾರತದ ಅತಿದೊಡ್ಡ ಫ್ಲೀಟ್ ಮಾಲೀಕರಾಗಿ ವಿಆರ್ಎಲ್ ಅನ್ನೋ ದೊಡ್ಡ ಸಾಮ್ರಾಜ್ಯ ಕಟ್ಟಿದ್ದಾರೆ ವಿಜಯ್ ಸಂಕೇಶ್ವರ್..
ತಾನು ಕಂಡ ಕನಸಿನ ಬೆನ್ನೇರಿ ಸತತ ಪರಿಶ್ರಮ ಪಟ್ಟ ವಿಜಯ ಸಂಕೇಶ್ವರ್ ಅವರು ಕಷ್ಟಗಳನ್ನೆಲ್ಲಾ ಮೆಟ್ಟಿ ನಿಂತು ಬಲು ಎತ್ತರಕ್ಕೆ ಬೆಳೆದರು.. ಸಾಧನೆಯ ಶಿಖರಕ್ಕೇರಿದರು.. ಸಾರಿಗೆ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.. ಇಂತಹ ಅಸಾಮಾನ್ಯ ಸಾಧಕನ ರೋಚಕ ಪಯಣ ಯಾವ್ ಸಿನಿಮಾ ಕಥೆಗಿಂತ ಕಮ್ಮಿಯಿಲ್ಲ.. ಅದೇ ಕಾರಣಕ್ಕೆ ಈಗ ವಿಜಯ ಸಂಕೇಶ್ವರ್ ಜೀವನ ಚರಿತ್ರೆ ಸಿನಿಮಾ ಆಗಿ, ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಧೂಳೆಬ್ಬಿಸುತ್ತಿದೆ.
ವಿಜಯ್ ಸಂಕೇಶ್ವರ ಜೀವನವೇ ಸಿಕ್ಕಾಪಟ್ಟೆ ರೋಚಕವಾಗಿವೆ. ಇಂತಹ ರೋಚಕಕಥೆಯನ್ನ.. ಸ್ವತಃ ವಿಜಯ ಸಂಕೇಶ್ವರ ಅವರಿಂದಲೇ ಕೇಳಿ.. ನಿರ್ದೇಶಕಿ ರಿಷಿಕಾ ಶರ್ಮಾ ಸಿನಿಮಾ ಮಾಡಿದ್ದಾರೆ. ಬಯೋಪಿಕ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಇದನ್ನು ಚಾಲೆಂಜ್ ಆಗಿ ಸ್ವೀಕರಿಸಿ ರಿಷಿಕಾ ಅವರು ‘ವಿಜಯಾನಂದ’ ಸಿನಿಮಾ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸ್ ಮಾಡುವ ಮೂಲಕ ಸಕ್ಸಸ್ ಕಂಡಿದ್ದಾರೆ..
ಸಾಮಾನ್ಯವಾಗಿ ವಿಜಯ್ ಸಂಕೇಶ್ವರ್ ಅವರ ಜೀವನದ ಕಥೆ ಎಲ್ಲಾರಿಗೂ ಗೊತ್ತು.. ಆದ್ರೆ ನಮಗೆ-ನಿಮಗೆ ಗೊತ್ತಿರುವುದು ಅಲ್ಪ ಸ್ವಲ್ಪ ಮಾತ್ರ.. ಈಗ ವಿಜಯಾನಂದ ಸಿನಿಮಾ ಮೂಲಕ ವಿಜಯ್ ಸಂಕೇಶ್ವರ್ ಅವರ ಜೀವನ ಕಥೆಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ..
ಕರುನಾಡಿಗೆ ಅರ್ಪಣೆ.. ಕನ್ನಡಿಗರ ಶ್ಲಾಘನೆ.. ಕಾಯಕಯೋಗಿಯ ಬಣ್ಣನೆ..!
ವಿಜಯಾನಂದ ಸಿನಿಮಾದಲ್ಲಿ ಮೈರೋಮಾಂಚನವಾಗುವ ಅನೇಕ ದೃಶ್ಯಗಳಿವೆ. ಜೀವನದಲ್ಲಿ ಸುಖ ದುಃಖ.. ಏಳು-ಬೀಳು ಕಾಮನ್.. ಯಾವುದೇ ಪರಿಸ್ಥಿತಿಯಲ್ಲಿಯೇ ನಮ್ಮ ಪ್ರಯತ್ನ ಬಿಡಬಾರದು. ಇನ್ನೇನು ಜೀವನದಲ್ಲಿ ಸೋಲುತ್ತೇವೆ ಅನ್ನೋ ಹಂತದಲ್ಲಿಯೇ.. ಮತ್ತೊಂದು ಅವಕಾಶವನ್ನ ಹುಡುಕಿ ಫಿನಿಕ್ಸ್ನಂತೆ ಮತ್ತೆ ನಮ್ಮ ಗುಡಿ ತಲುಪಬೇಕು.. ಸಾಧನೆಯ ಹಾದಿಯಲ್ಲಿ ನಡೆಯಬೇಕು ಅನ್ನೋವುದು ಈ ಸಿನಿಮಾದಲ್ಲಿದೆ.. ಯುವ ಮನಸ್ಸುಗಳಿಗೆ ಸ್ಪೂರ್ತಿ ನೀಡುತ್ತಿದೆ ಈ ವಿಜಯಾನಂದ..
ಕಥೆ ಆರಂಭವಾಗುವುದು ಮುಂಬೈಯಿಂದ ಗದಗಕ್ಕೆ ಬಂದ ರೈಲಿನಿಂದ ವಿಜಯ್ ಸಂಕೇಶ್ವರ್ ಇಳಿಯುವ ಮೂಲಕ. ತಂದೆಯ ಹಳೆಯ ಮಾದರಿ ಪ್ರಿಂಟಿಂಗ್ ಪ್ರೆಸ್‌ಗೆ ವೇಗ ತುಂಬಲೆಂದು ಹೊಸದೊಂದು ಸೆಮಿ ಆಟೊಮ್ಯಾಟಿಕ್ ಪ್ರಿಂಟಿಂಗ್ ಯಂತ್ರ ತರುತ್ತಾರೆ ವಿಜಯ್ ಸಂಕೇಶ್ವರ್. ಅಪ್ಪ ಹತ್ತು ದಿನ ಮಾಡಿದ್ದನ್ನು ಮಗ ಒಂದೇ ದಿನದಲ್ಲಿ ಮಾಡುತ್ತಾನೆ, ಉದ್ಯಮದಲ್ಲಿ ವೇಗ ಬೇಕು ವಿಜಯ್ ಸಂಕೇಶ್ವರ್‌ಗೆ. ಅದೇ ಕಾರಣಕ್ಕೆ ಪ್ರಿಂಟಿಂಗ್ ಪ್ರೆಸ್ ಬಿಟ್ಟು ಸಾರಿಗೆ ಉದ್ಯಮಕ್ಕೆ ಇಳಿಯುತ್ತಾರೆ. ಮೊದಲಿಗೆ ಒಂದು ಲಾರಿ, ಬಳಿಕ ನಾಲ್ಕು ಹೀಗೆ ವರ್ಷಗಳುರುಳಿದಂತೆ ಲಾರಿಗಳ ಸಂಖ್ಯೆ ದುಪ್ಪಟ್ಟು, ಮೂರ್ಪಟ್ಟು ಆಗುತ್ತಲೇ ಹೋಗುತ್ತವೆ.
ಸಿನಿಮಾದ ಮೊದಲ ಕೆಲ ನಿಮಿಷಗಳು ಪ್ರಿಂಟಿಂಗ್ ಪ್ರೆಸ್‌ನಲ್ಲಿಯೇ ಕಥೆ ಗಿರಕಿ ಹೊಡೆಯುತ್ತದೆ. ಈ ನಡುವೆ ಅಪ್ಪ ಹಾಗೂ ಮಗನ ನಡುವಿನ ಸಂಬಂಧದವನ್ನ ಅದ್ಭುತವಾಗಿ ವರ್ಣಿಸಿದ್ದಾರೆ.. ವಿಜಯ್‌ಗೆ ವ್ಯವಹಾರದಲ್ಲಿರುವ ಚುರುಕುತನ, ಆತನ ದೂರದೃಷ್ಟಿ, ಬ್ಯುಸಿನೆಸ್ ಮಾಡುವ ಹಂಬಲ ಎಲ್ಲದರ ಪರಿಚಯವನ್ನೂ ಸೂಕ್ಷ್ಮವಾಗಿ ನಿರ್ದೇಶಕಿ ರಿಷಿಕಾ ಶರ್ಮಾ ಮಾಡಿಸಿದ್ದಾರೆ. ಇದ್ರ ನಡುವೇ ವಿಜಯ್ ಸಂಕೇಶ್ವರ್ ಅವರ ಮದುವೆ.. ಡುಯೇಟ್ ಸಾಂಗ್ ನೋಡುಗರನ್ನ ಮೋಡಿ ಮಾಡುತ್ತದೆ.. ವಿಜಯ್ ಸಂಕೇಶ್ವರ್ ಹಾಗೂ ಲಲಿತಾ ಸಂಕೇಶ್ವರ್ 70ರ ದಶಕದಲ್ಲಿ ಕಾಣಿಸಿಕೊಳ್ಳುವ ಪರಿ ಪ್ರೇಕ್ಷಕರನ್ನ ಸೆಳೆಯುತ್ತದೆ..
ಆದರೆ ನಿಜವಾಗಿಯೂ ಕಥೆ ಶುರುವಾಗುವುದು ವಿಜಯ್ ಸಂಕೇಶ್ವರ್ ಲಾರಿ ಖರೀದಿ ಮಾಡಿದ ಬಳಿಕ. ಸಾಲ ಮಾಡಿ ಒಂದು ಲಾರಿ ಖರೀದಿಸಿದ ಬಳಿಕ ವಿಜಯ್ ಸಂಕೇಶ್ವರ್ ಆ ಬಳಿಕ ಎದುರಿಸುವ ಸವಾಲುಗಳು, ಅಡೆ-ತಡೆಗಳು, ದೈಹಿಕ, ಮಾನಸಿಕ ಶ್ರಮಗಳು ಪ್ರೇಕ್ಷಕನನ್ನು ಎಮೋಷನಲ್ ಆಗಿಸುತ್ತದೆ. ತಮ್ಮ ಲಾರಿ ಉದ್ಯಮವನ್ನು ಬೆಳೆಸಲು ವಿಜಯ್ ಸಂಕೇಶ್ವರ್ ಮಾಡಿದ ಹೋರಾಟ, ಶ್ರಮದ ಕಥನ ಬಹು ಕುತೂಹಲಕಾರಿಯೂ, ಸ್ಪೂರ್ತಿದಾಯಕವಾಗಿಯೂ ಇದೆ. ಉದ್ಯಮ ಕಟ್ಟುವಲ್ಲಿ ವಿಜಯ್ ಸಂಕೇಶ್ವರ್ ಎದುರಿಸಿದ ಸೋಲುಗಳನ್ನು ಅದನ್ನು ಮೆಟ್ಟಿನಿಂತ ಬಗೆಗಳು ನವೋದ್ಯಮಿಗಳಿಗೆ ಸ್ಪೂರ್ತಿ.
ಲಾರಿ ಉದ್ಯಮದ ಸಾಮ್ರಾಜ್ಯ ಸ್ಥಾಪಿಸಿದ ವಿಜಯ್ ಸಂಕೇಶ್ವರ್.. ನಂತ್ರ ಅವರ ಗುರಿ ಪತ್ರಿಕೋದ್ಯಮದ ಕಡೆಗೆ.. ಹೌದು ಹಿರಿಯ ಪತ್ರಕರ್ತರೊಬ್ಬರು ವಿಜಯ್ ಸಂಕೇಶ್ವರ್ ಅವರನ್ನ ಕಾಲೆಳೆದಿದ್ದಕ್ಕೆ.. ಅದೇ ಚಾಲೆಂಜ್ ಆಗಿ ತೆಗೆದುಕೊಂಡು ದಿನಪತ್ರಿಕೆಯೊಂದನ್ನೇ ಆರಂಭಿಸುವ ವಿಜಯ್, ಅದೇ ಹಿರಿಯ ಪತ್ರಿಕೋದ್ಯಮಿಯಿಂದ ಎದುರಾದ ಅಡೆ-ತಡೆಗಳನ್ನು ದಾಟಿ ತಮ್ಮ ಪತ್ರಿಕೆಯನ್ನು ನಂಬರ್ ಒನ್ ಮಾಡ್ತಾರೆ. ನಂತರ ಅದನ್ನು ಮಾರಾಟ ಮಾಡಿ ಮತ್ತೊಂದು ಪತ್ರಿಕೆ ಆರಂಭಿಸಿ ಅದನ್ನೂ ನಂಬರ್ ಒನ್ ಮಾಡುತ್ತಾರೆ. ಆದ್ರೆ ಪುತ್ರ ಆನಂದ್ ಸಂಕೇಶ್ವರ್ಗಾಗಿ ಏನ್ ಮಾಡ್ತಾರೆ.. ಕ್ಲೈಮ್ಯಾಕ್ಸ್ ಹೇಗಿರುತ್ತೆ..? ರಾಜಕೀಯ ಕ್ಷೇತ್ರದಲ್ಲಿ ವಿಜಯ್ ಸಂಕೇಶ್ವರ್ ಎದುರಿಸು ಸವಾಲುಗಳೇನು..? ಅನ್ನೋ ಕ್ಯೂರಿಯಾಸಿಟಿ ನಿಮ್ಮಲ್ಲಿ ಬಿಲ್ಡ್ ಆಗಿರಬೇಕಲ್ವಾ..? ಹಾಗಾದ್ರೆ ನೀವು ಥಿಯೇಟರ್ಗೆ ಹೋಗಿ ಸಿನಿಮಾ ನೋಡಲೇಬೇಕು..
ವಿಜಯ್ ಸಂಕೇಶ್ವರ್ ಪಾತ್ರದಲ್ಲಿ ನಿಹಾಲ್ ಅದ್ಭುತವಾಗಿ ನಟಿಸಿದ್ದಾರೆ.. ಇನ್ನು ಲಲಿತಾ ಸಂಕೇಶ್ವರ್ ಪಾತ್ರದಲ್ಲಿ ಸಿರಿ ಪ್ರಹ್ಲಾದ್ ಮೋಡಿ ಮಾಡಿದ್ದಾರೆ.. ಉಳಿದಂತೆ ವಿಜಯ್ ತಂದೆ ಪಾತ್ರದಲ್ಲಿ ಹಿರಿಯ ನಟ ಆನಂತ್ ನಾಗ್ ಹಾಗೂ ಅವರ ಅಮ್ಮನ ಪಾತ್ರದಲ್ಲಿ ವಿನಯ ಪ್ರಸಾದ್ ನಟನೆ ಸೂಪರ್ ಆಗಿದೆ.. ಗದಗ್ ದಾದಾ ಅನ್ನೋ ವಿಶೇಷ ಪಾತ್ರದಲ್ಲಿ ರವಿಚಂದ್ರನ್.. ಆನಂದ್ ಸಂಕೇಶ್ವರ್ ಪಾತ್ರದಲ್ಲಿ ಭರತ್ ಬೋಪ್ಪಣ್ಣ.. ಆನಂದ್ ಸಂಕೇಶ್ವರ್ ಪತ್ನಿ ವಾಣಿ ಸಂಕೇಶ್ವರ್ ಪಾತ್ರದಲ್ಲಿ ಅರ್ಚನಾ ಕೊಟ್ಟಿಗೆ ನಟನೆ ಬೊಂಬಾಟ್ ಆಗಿದೆ.. ಇನ್ ಕೆಲ ವಿಶೇಷ ಪಾತ್ರದಲ್ಲಿ ಶೈನ್ ಶೆಟ್ಟಿ, ದಯಾಳ್ ಪದ್ಮಾನಾಭನ್ ಸೇರಿದಂತೆ ಕೆಲ ಕಲಾವಿದರ ಆ್ಯಕ್ಟಿಂಗ್ ಚೆನ್ನಾಗಿದೆ.. ಗೋಪಿ ಸುಂದರ್ ಮ್ಯೂಸಿಕ್ನಲ್ಲಿ ಮೂಡಿಬಂದ ಸಾಂಗ್ಗಳು ಕಲರ್ಪುಲ್ ಆಗಿದೆ..
ಒಟ್ಟಾರೆಯಾಗಿ ವಿಜಯಾನಂದ ಸಿನಿಮಾ ಬಿಗ್ ಸ್ಕ್ರೀನ್ ಮೇಲೆ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡ್ತಿದೆ.. ಒಂದಷ್ಟು ಕಾಮಿಡಿ.. ಸ್ವಲ್ಪ ಎಮೋಷನ್ ಹಾಗೂ ನೋಡುಗರಿಗೆ ಇನ್ಸ್ಪೈರ್ ಮಾಡ್ತಿದೆ ವಿಜಯಾನಂದ.. ನೀವು ಸಹ ಒಂದು ಸಲ ಥಿಯೇಟರ್ಗೆ ಹೋಗಿ ವಿಜಯಾನಂದ ಸಿನಿಮಾ ಕಣ್ತುಂಬಿಕೊಂಡು ಎಂಜಾಯ್ ಮಾಡಿ..
ಇದನ್ನೂ ಓದಿ : ಗೋವಿಂದರಾಜ ನಗರದಲ್ಲಿ ರಾಜಕೀಯ ಕ್ರಾಂತಿ….ನಾಳೆ ಪ್ರಭಾವಿ ಕಾಂಗ್ರೆಸ್ ನಾಯಕ ಬಿಜೆಪಿಗೆ ಸೇರ್ಪಡೆ…