ಉಡುಪಿ: ಮರವಂತೆ ಬೀಚ್ ನಲ್ಲಿ ಶನಿವಾರ ತಡರಾತ್ರಿ ಸಮುದ್ರಕ್ಕೆ ಕಾರು ಬಿದ್ದು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ ರೋಶನ್ ಆಚಾರ್ಯ ಶವ ಇಂದು ಪತ್ತೆಯಾಗಿದೆ.
ಶನಿವಾರ ತಡರಾತ್ರಿ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರು ರಾಷ್ಟ್ರೀಯ ಹೆದ್ದಾರಿ 66ರ ಪಕ್ಕ ಇರುವ ಮರವಂತೆ ಬೀಚ್ ನಲ್ಲಿ ಸಮುದ್ರಕ್ಕೆ ಬಿದ್ದಿತ್ತು. ಕಾರಿನಲ್ಲಿದ್ದ ನಾಲ್ವರ ಪೈಕಿ ಇಬ್ಬರು ಮೃತಪಟ್ಟಿದ್ದರು. ಕೋಟೇಶ್ವರ ಮೂಲದ ವಿರಾಜ್ ಆಚಾರ್ಯ ಶವ ಕಾರಿನಲ್ಲೇ ಪತ್ತೆಯಾಗಿತ್ತು. ರೋಶನ್ ಆಚಾರ್ಯ ಮೃತದೇಹ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿತ್ತು. ಕಾರ್ತಿಕ್ ಮತ್ತು ಸಂದೀಪ್ ಗಾಯಗೊಂಡಿದ್ದರು.
ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ ರೋಶನ್ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಇಂದು ಹೊಸಾಡು ಬಳಿಯ ಕಂಚುಗೋಡು ಬಳಿ ರೋಶನ್ ಆಚಾರ್ಯ ಶವ ಪತ್ತೆಯಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.