ಕುಷ್ಟಗಿ : ಕೊಪ್ಪಳ ಜಿಲ್ಲೆಯ ಕುಷ್ಟಗಿ ಜಿಲ್ಲೆಯ ಇತಿಹಾಸವನ್ನ ನೋಡಿದ್ರೆ.. ಎಲ್ಲರೂ ಅವಾಕ್ಕಾಗೋದು ಗ್ಯಾರಂಟಿ. ಯಾಕಂದ್ರೆ, ಇದುವರೆಗೆ ಈ ಕ್ಷೇತ್ರದಲ್ಲಿ ಸತತವಾಗಿ ಎರಡನೇ ಬಾರಿಗೆ ಯಾವುದೇ ಶಾಸಕರನ್ನ ಗೆಲ್ಲಿಸಿದ ಇತಿಹಾಸವಿಲ್ಲ. ಇಲ್ಲಿ ನಡೆದ ಎರಡನೇ ಚುನಾವಣೆಯಲ್ಲಿಯೇ ಕಾಂಗ್ರೆಸ್ ಮುಗ್ಗರಿಸಿತ್ತು. ಇಲ್ಲಿ ಲೋಕಸೇವಕ ಸಂಘದ ಅಭ್ಯರ್ಥಿ ಗೆದ್ದಿದ್ರು. ಇದಾದ ಬಳಿಕ ಸತತ 17 ವರ್ಷ ಕಾಂಗ್ರೆಸ್ ಶಾಸಕರೇ ಗೆದ್ರೂ, ಹಾಲಿ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ನೀಡಿರಲಿಲ್ಲ. ಈ ಸಂಪ್ರದಾಯ ಇದುವರೆಗೆ ಮುಂದುವರಿದುಕೊಂಡು ಬಂದಿದೆ. ಇದು ಹಾಲಿ ಶಾಸಕ ಅಮರೇಗೌಡ ಬಯ್ಯಾಪುರಗೆ ಕಂಟಕವಾಗಿ ಪರಿಣಮಿಸಿದೆ. 2004ರಲ್ಲಿ ಇಲ್ಲಿ ಬಿಜೆಪಿಯ ದೊಡ್ಡನಗೌಡ ಪಾಟೀಲ್ ಗೆದ್ದಿದ್ರು. 2008ರಲ್ಲಿ ದೊಡ್ಡನಗೌಡರನ್ನ ಸೋಲಿಸಿದ ಅಮರೇಗೌಡ ಬಯ್ಯಾಪುರ ವಿಧಾನಸೌಧ ಪ್ರವೇಶಿಸಿದ್ರು. 2013ರಲ್ಲಿ ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಬೀಸಿದ್ರೂ, ದೊಡ್ಡನಗೌಡಪಾಟೀಲ್ ಗೆದ್ದಿದ್ರು. 2018ರಲ್ಲಿ ಯಡಿಯೂರಪ್ಪ ಅಲೆ ಇದ್ರೂ ದೊಡ್ಡನಗೌಡರನ್ನ ಸೋಲಿಸಲು ಅಮರೇಗೌಡ ಬಯ್ಯಾಪುರ ಯಶಸ್ವಿಯಾಗಿದ್ರು. ಇಂತಾ ಕ್ಷೇತ್ರದ 2018ರ ಚುನಾವಣೆ ಫಲಿತಾಂಶ ನೋಡೋದಾದ್ರೆ.
2018ರ ಚುನಾವಣೆ ಫಲಿತಾಂಶ
ಅಮರೇಗೌಡ ಬಯ್ಯಾಪುರ(ಕಾಂಗ್ರೆಸ್) – 87,567
ದೊಡ್ಡನಗೌಡ ಪಾಟೀಲ್(ಬಿಜೆಪಿ) – 69,536
ಗೆಲುವಿನ ಅಂತರ – 18,031
ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಅಮರೇಗೌಡ ಬಯ್ಯಾಪುರ 87 ಸಾವಿರದ 567 ಮತಗಳನ್ನ ಪಡೆದಿದ್ರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ದೊಡ್ಡನಗೌಡ ಪಾಟೀಲ್ 69 ಸಾವಿರದ 536 ಮತಗಳನ್ನ ಪಡೆದಿದ್ರು. ಈ ಮೂಲಕ ಅಮರೇಗೌಡ ಬಯ್ಯಾಪುರ 18 ಸಾವಿರದ 31 ಮತಗಳ ಅಂತರದಿಂದ ಗೆದ್ದಿದ್ರು.
ಕುಷ್ಟಗಿ ಜಾತಿ ಸಮೀಕರಣ
ಲಿಂಗಾಯತ – 66,000
ಪರಿಶಿಷ್ಟ ಜಾತಿ – 35,000
ಕುರುಬ – 34,000
ಪರಿಶಿಷ್ಟ ಪಂಗಡ – 22,000
ಮುಸ್ಲಿಂ – 20,000
ಉಪ್ಪಾರ – 15,000
ಇತರ – 23,000
ಕುಷ್ಟಗಿ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ 66 ಸಾವಿರ ಮತದಾರರಿದ್ದು ಬಯ್ಯಾಪುರ ಮತ್ತು ಬಿಜೆಪಿ ನಡುವೆ ಹಂಚಿ ಹೋಗಿದ್ದಾರೆ. ಪರಿಶಿಷ್ಟ ಜಾತಿಯ 35 ಸಾವಿರ ಮತದಾರರಿದ್ದು, ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಬೆಂಬಲಿಸಿಕೊಂಡು ಬರ್ತಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಕುರುಬ ಸಮುದಾಯಕ್ಕೆ ಸೇರಿರೋದ್ರಿಂದ ಕುರುಬ ಸಮುದಾಯದ 34 ಸಾವಿರ ಮತದಾರರು ಬಿಜೆಪಿ ಮತಬ್ಯಾಂಕ್ ಆಗಿದ್ದಾರೆ. ಪರಿಶಿಷ್ಟ ಪಂಗಡದ 22 ಸಾವಿರ ಮತದಾರರಿದ್ದು ಬಿಜೆಪಿ ಪರ ಒಲವು ಹೊಂದಿದ್ದಾರೆ. ಮುಸ್ಲಿಂ ಸಮುದಾಯದ 20 ಸಾವಿರ ಮತದಾರರು ಕಾಂಗ್ರೆಸ್ ಮತ ಬ್ಯಾಂಕ್ ಆಗಿದ್ದಾರೆ. ಉಪ್ಪಾರ ಸಮುದಾಯದ 15 ಸಾವಿರ ಮತದಾರರು ಒಂದು ಬಾರಿ.. ಒಂದು ಬಾರಿಗೆ ಇವರಿಗೆ ಬೆಂಬಲಿಸ್ತಿದ್ದಾರೆ ಅನ್ನೋದಕ್ಕೆ ಫಲಿತಾಂಶಗಳೇ ಉತ್ತಮ ಉದಾಹರಣೆ. ಇತರ ಸಮುದಾಯಗಳ 23 ಸಾವಿರ ಮತದಾರರು ಗೆಲ್ಲೋ ಅಭ್ಯರ್ಥಿಗೆ ಮತ ನೀಡ್ತಿರೋದಕ್ಕೂ ಚುನಾವಣೆ ಫಲಿತಾಂಶಗಳೇ ಸಾಕ್ಷಿಯಾಗಿವೆ.
ಕುಷ್ಟಗಿಯಲ್ಲಿ ಇದುವರೆಗೆ ಸತತವಾಗಿ ಎರಡನೇ ಬಾರಿಗೆ ಒಬ್ಬ ವ್ಯಕ್ತಿ ಗೆದ್ದ ಇತಿಹಾಸವೇ ಇಲ್ಲ. ಅಂತಾ ವಿಚಿತ್ರ ಕ್ಷೇತ್ರವಿದು. ಇಲ್ಲಿ ಸತತವಾಗಿ ಕಾಂಗ್ರೆಸ್ ಗೆದ್ದಿರಬಹುದು.. ಆದ್ರೆ, ಒಬ್ಬನೇ ವ್ಯಕ್ತಿಗೆ ಟಿಕೆಟ್ ಕೊಟ್ಟು ಕಾಂಗ್ರೆಸ್ ಸತತವಾಗಿ ಗೆದ್ದಿಲ್ಲ. ಇಂತಾ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಲು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಸಿದ್ಧರಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇಲ್ಲದಿದ್ರೂ.. ಕ್ಷೇತ್ರದ ಅಭಿವೃದ್ಧಿ ಮಾಡ್ತಿದ್ದಾರೆ. ಆದ್ರೆ, ಅಮರೇಗೌಡ ಬಯ್ಯಾಪುರ ಅವರ ಮಗ ಮತ್ತು ಅಳಿಯ ಕುಟುಂಬ ಗುತ್ತಿಗೆ ಲಾಬಿಯಲ್ಲಿ ಮುಳುಗಿ ಹೋಗಿದೆ ಅನ್ನೋ ದೊಡ್ಡ ಆರೋಪ ಕೇಳಿ ಬರ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನ ನಿರ್ಲಕ್ಷಿಸಿದ್ದಾರೆ ಅಂತಾ ಶಾಸಕರ ವಿರುದ್ಧ ಕಾರ್ಯಕರ್ತರು ಹೈಕಮಾಂಡ್ಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ನಡೆಸಿರೋ ಆಂತರಿಕ ಸಮೀಕ್ಷೆಯಲ್ಲೂ ಬಯ್ಯಾಪುರಗೆ ಇಲ್ಲಿ ಹಿನ್ನಡೆಯಾಗಲಿದೆ ಅನ್ನೋ ವರದಿ ಬಂದಿದೆ.
ಇಲ್ಲಿ ಸತತವಾಗಿ ಒಬ್ಬ ವ್ಯಕ್ತಿ ಗೆಲ್ಲದೇ ಇರಬಹುದು.. ಆದ್ರೆ, ಇಲ್ಲಿ ಸತತವಾಗಿ ಗೆದ್ದು ಕಾಂಗ್ರೆಸ್ ಇತಿಹಾಸ ಬರೆದಿದೆ. ಈ ಇತಿಹಾಸ ಮರುಕಳಿಸಬೇಕಾದ್ರೆ, ಅಭ್ಯರ್ಥಿಯನ್ನ ಬದಲಿಸಿ, ಹೊಸ ಮುಖಕ್ಕೆ ಮಣೆ ಹಾಕಿದ್ರೆ ಸಾಕು ಅಂತಾ ಕ್ಷೇತ್ರದಲ್ಲಿರೋ ರಾಜಕೀಯ ಪಂಡಿತರು ಭವಿಷ್ಯ ನುಡಿದಿದ್ದಾರೆ. ಇದೇ ಕಾರಣಕ್ಕೆ ಕುಷ್ಟಗಿ ಕ್ಷೇತ್ರದ ಟಿಕೆಟ್ಗಾಗಿ ಅಮರೇಗೌಡ ಬಯ್ಯಾಪುರ ಜೊತೆಗೆ, ಮಾಜಿ ಶಾಸಕ ಹಸನ್ ಸಾಬ್ ಸೇರಿ ಮತ್ತಿಬ್ಬರು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಈ ಬಾರಿ ಅಭ್ಯರ್ಥಿಯನ್ನ ಬದಲಿಸಿ ಕ್ಷೇತ್ರವನ್ನ ಉಳಿಸಿಕೊಳ್ಳಲು ಕಾಂಗ್ರೆಸ್ ಆದ್ಯತೆ ನೀಡೋ ಸಾಧ್ಯತೆ ಇದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರೋ ದೊಡ್ಡನಗೌಡ ಪಾಟೀಲ್ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ರಾಜ್ಯದಲ್ಲಿ ಹಲವು ಕ್ಷೇತ್ರಗಳಲ್ಲಿನ ಕುರುಬ ಸಮುದಾಯದ ಮತದಾರರು ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿರೋ ಕಾರಣಕ್ಕೆ ಕಾಂಗ್ರೆಸ್ ಬೆಂಬಲಿಸಿದ್ರೆ, ಇಲ್ಲಿ ಮಾತ್ರ ಬಿಜೆಪಿಯ ಮತಬ್ಯಾಂಕ್ ಆಗಿದ್ದಾರೆ. ತಮ್ಮ ಸಮುದಾಯದ ವ್ಯಕ್ತಿಗೆ ಬಿಜೆಪಿ ಟಿಕೆಟ್ ನೀಡೋದ್ರಿಂದ, ಆ ವ್ಯಕ್ತಿಯ ಹಿಂದೆ ನಿಲ್ಲುತ್ತಿದ್ದಾರೆ. ಇದೇ ಕಾರಣಕ್ಕೆ 2013ರಲ್ಲಿ ಬಿಜೆಪಿ ವಿರೋಧಿ ಅಲೆ ಇದ್ರೂ ದೊಡ್ಡನಗೌಡ ಪಾಟೀಲ್ ಗೆದ್ದಿದ್ರು. ಈಗ ಮತ್ತೆ ಕುಷ್ಟಗಿ ಮತದಾರರು ದೊಡ್ಡನಗೌಡ ಪಾಟೀಲ್ ಪರ ನಿಲ್ಲೋ ಎಲ್ಲ ಸೂಚನೆಗಳು ಕಂಡು ಬರ್ತಿವೆ. ಲಿಂಗಾಯತ, ಕುರುಬ, ಪರಿಶಿಷ್ಟ ಪಂಗಡದ ಮತದಾರರ ಜೊತೆಗೆ ಉಪ್ಪಾರ ಸಮುದಾಯವೂ ಇಲ್ಲಿ ಹೆಚ್ಚು ಮತದಾರರನ್ನ ಹೊಂದಿದ್ದು, ಇವರೆಲ್ಲ ಒಂದಾಗಿ ದೊಡ್ಡನಗೌಡ ಪಾಟೀಲ್ ಬೆಂಬಲಕ್ಕೆ ನಿಲ್ಲೋ ಸಾಧ್ಯತೆಗಳು ಕಂಡು ಬರ್ತಿವೆ.
ಕುಷ್ಟಗಿ ಕ್ಷೇತ್ರದಲ್ಲಿ ಬಿಟಿವಿ ನಡೆಸಿರೋ ಮೆಗಾ ಸರ್ವೆಯ ಸದ್ಯದ ಟ್ರೆಂಡ್ ಪ್ರಕಾರ ಹಾಲಿ ಶಾಸಕ ಅಮರೇಗೌಡ ವಿರುದ್ಧ ಆರೋಪಗಳಿದ್ರೂ, ಮತ್ತೆ ಶಾಸಕರಾಗೋ ಸಾಧ್ಯತೆಗಳು ಹೆಚ್ಚಿದೆ.
ಇದನ್ನೂ ಓದಿ : ಮೈಸೂರಿನಲ್ಲಿ “ಜಸ್ಟ್ ಪಾಸ್” ಚಿತ್ರಕ್ಕೆ ಬಿರುಸಿನ ಚಿತ್ರೀಕರಣ…