ಕೊಪ್ಪಳ : ಕನಕಗಿರಿ.. 1978ರಲ್ಲಿ ನಡೆದಿದ್ದ ಕ್ಷೇತ್ರ ಪುನರ್ವಿಗಡಣೆಯ ಬಳಿಕ ಅಸ್ತಿತ್ವಕ್ಕೆ ಬಂದಿದ್ದ ಕ್ಷೇತ್ರ. ಇಂತಾ ಕ್ಷೇತ್ರದಲ್ಲಿ ಮೊದಲ ಎರಡು ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆದ್ರೆ, 1985ರ ವೇಳೆಗೆ ಜನರ ಮೂಡ್ ಬದಲಾಗಿತ್ತು. ಕಾಂಗ್ರೆಸ್ ಬದಲಿಗೆ ಜನತಾಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಿದ್ರು. 1989ರಲ್ಲಿ ಮತ್ತೆ ಕಾಂಗ್ರೆಸ್ ಗೆದ್ದಿತ್ತು. 1994ರಲ್ಲಿ ಜನತಾದಳದ ಅಭ್ಯರ್ಥಿ ಗೆದ್ದಿದ್ರು. 1999ರಲ್ಲಿ ಕಾಂಗ್ರೆಸ್ ಗೆದ್ರೆ, 2004ರಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ರು. 2008ರಲ್ಲಿ ಮತ್ತೆ ಕ್ಷೇತ್ರ ಪುನರ್ವಿಂಗಡಣೆಯಾದ ಬಳಿಕ ಇದು ಮೀಸಲು ಕ್ಷೇತ್ರವಾಯ್ತು. ಅಲ್ಲಿಂದ ನಡೆದಿರೋ ಮೂರು ಚುನಾವಣೆಗಳಲ್ಲಿ ಎರಡು ಬಾರಿ ಶಿವರಾಜ ತಂಗಡಗಿ ಗೆದ್ದಿದ್ರೆ, 2018ರಲ್ಲಿ ಬಿಜೆಪಿಯ ಬಸವರಾಜ ದಢೇಸುಗೂರು ಗೆದ್ದು ಬೀಗಿದ್ರು. 2018ರ ಚುನಾವಣೆ ಫಲಿತಾಂಶ ನೋಡೋದಾದ್ರೆ.
2018ರ ಚುನಾವಣೆ ಫಲಿತಾಂಶ
ಬಸವರಾಜ ದಢೇಸುಗೂರು(ಬಿಜೆಪಿ) – 87,735
ಶಿವರಾಜ ತಂಗಡಗಿ(ಕಾಂಗ್ರೆಸ್) – 73,510
ಗೆಲುವಿನ ಅಂತರ – 14,225
ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸವರಾಜ ದಢೇಸುಗೂರು 87 ಸಾವಿರದ 735 ಮತಗಳನ್ನ ಪಡೆದಿದ್ರೆ, ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಶಿವರಾಜ ತಂಗಡಗಿ 73 ಸಾವಿರದ 510 ಮತಗಳನ್ನ ಪಡೆದಿದ್ರು. ಈ ಮೂಲಕ ಬಸವರಾಜ ದಢೇಸುಗೂರು 14 ಸಾವಿರದ 225 ಮತಗಳ ಅಂತರದಿಂದ ಜಯದ ನಗೆ ಬೀರಿದ್ರು.
ಕನಕಗಿರಿ ಜಾತಿ ಸಮೀಕರಣ
ಪರಿಶಿಷ್ಟ ಜಾತಿ – 43,000
ಲಿಂಗಾಯತ – 42,000
ಕುರುಬ – 35,000
ಪರಿಶಿಷ್ಟ ಪಂಗಡ – 29,000
ಮುಸ್ಲಿಂ – 17,000
ಇತರ – 34,000
ಕನಕಗಿರಿ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ 43 ಸಾವಿರ ಮತದಾರರಿದ್ದು, ಎರಡು ಪಕ್ಷಗಳ ನಡುವೆ ಹಂಚಿ ಹೋಗಿದ್ದಾರೆ. ಲಿಂಗಾಯತ ಸಮುದಾಯದ 42 ಸಾವಿರ ಮತದಾರರಿದ್ದು, ಇವರು ಬಿಜೆಪಿ ವೋಟ್ ಬ್ಯಾಂಕ್ ಆಗಿದ್ದಾರೆ. ಕುರುಬ ಸಮುದಾಯದ 35 ಸಾವಿರ ಮತದಾರರಿದ್ದು, ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿರೋ ಕಾರಣಕ್ಕೆ ಕಾಂಗ್ರೆಸ್ಗೆ ಮತ ಚಲಾಯಿಸುತ್ತಿದ್ದಾರೆ. ಪರಿಶಿಷ್ಟ ಪಂಗಡದ 29 ಸಾವಿರ ಮತದಾರರಿದ್ದು, ಇವರು ಬಿಜೆಪಿ ಪರ ಒಲವು ಹೊಂದಿದ್ದಾರೆ. ಮುಸ್ಲಿಂ ಸಮುದಾಯದ 17 ಸಾವಿರ ಮತದಾರರಿದ್ದು, ಇವರು ಸಾಂಪ್ರದಾಯಿಕವಾಗಿ ಕಾಂಗ್ರೆಸ್ಗೆ ಮತ ಚಲಾಯಿಸಿಕೊಂಡು ಬಂದಿದ್ದಾರೆ. ಇತರ ಸಮುದಾಯಗಳ 34 ಸಾವಿರ ಮತದಾರರೇ ನಿರ್ಣಾಯಕವಾಗಿದ್ದು, ಇವರು ಯಾರಿಗೆ ಮತ ಚಲಾಯಿಸ್ತಾರೋ ಅವರೇ ಇಲ್ಲಿ ಗೆದ್ದು ಬರ್ತಿದ್ದಾರೆ.
2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಬಸವರ ದಢೇಸುಗೂರು 5 ಸಾವಿರ ಮತಗಳ ಅಂತರದಲ್ಲಿ ಸೋತಿದ್ರು. 2018ರಲ್ಲಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದ ದಢೇಸುಗೂರು 14 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ರು. ಮೊದಲ ಬಾರಿ ಗೆದ್ದಿದ್ದ ದಢೇಸುಗೂರು ಕುರಿತು ಕ್ಷೇತ್ರದ ಜನರು ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ರು. ಆದ್ರೆ, ಮತದಾರರು ಇಟ್ಟಿದ್ದ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ದಢೇಸುಗೂರು ವಿಫಲರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಸಹ ಕ್ಷೇತ್ರಕ್ಕೆ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ ಅನ್ನೋ ಆರೋಪಗಳು ಕೇಳಿ ಬರ್ತಿವೆ. ಇದರ ನಡುವೆ ಮಾಜಿ ಶಾಸಕ ಶಿವರಾಜ ತಂಗಡಗಿ ಪರ ಕ್ಷೇತ್ರದಲ್ಲಿ ಅಲೆ ಎದ್ದಿದೆ. ಶಿವರಾಜ ತಂಗಡಗಿ ಶಾಸಕರಾಗಿದ್ದ ವೇಳೆ, ಸಚಿವರಾಗಿದ್ದ ವೇಳೆ ಮಾಡಿದ್ದ ಕೆಲಸಗಳು ಅವರ ಕೈ ಹಿಡಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಕಳೆದ ಬಾರಿ ಸೋಲಿನ ಸೇಡು ತೀರಿಸಿಕೊಳ್ಳೋಕೆ ತಂಗಡಗಿ ತವಕಿಸುತ್ತಿದ್ದಾರೆ.
ಕನಕಗಿರಿ ಕ್ಷೇತ್ರದ ಮಾಜಿ ಶಾಸಕ ಶಿವರಾಜ ತಂಗಡಗಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಈ ಬಾರಿಯೂ ಕನಕಗಿರಿ ಕ್ಷೇತ್ರದಲ್ಲಿ ಅವರಿಗೇ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಇದೇ ಕಾರಣಕ್ಕೆ ಕ್ಷೇತ್ರದೆಲ್ಲೆಡೆ ಶಿವರಾಜ ತಂಗಡಗಿ ಮಿಂಚಿನ ಸಂಚಾರ ನಡೆಸಿದ್ದು, ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಶಿವರಾಜ ತಂಗಡಗಿ ಸಹ ತಾವು ಶಾಸಕರಾಗಿದ್ದ ವೇಳೆ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸಲು ಶ್ರಮ ಪಡುತ್ತಿದ್ದಾರೆ. ಅಲ್ದೆ, ಹಾಲಿ ಶಾಸಕ ಬಸವರಾಜ ದಢೇಸುಗೂರು ವೈಫಲ್ಯಗಳನ್ನು ಎತ್ತಿ ತೋರಿಸುತ್ತಿದ್ದು, ಜನರಿಗೆ ತಾವು ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಎತ್ತಿ ತೋರಿಸುತ್ತಿದ್ದಾರೆ. ಕನಕಗಿರಿ ಕ್ಷೇತ್ರದಲ್ಲಿ ಕುರುಬ ಮತ್ತು ಮುಸ್ಲಿಂ ಸಮುದಾಯದ ಮತಗಳು ಹೆಚ್ಚಾಗಿವೆ. ಶಿವರಾಜ ತಂಗಡಗಿ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದು, ಕುರುಬ ಸಮುದಾಯ ಇವರ ಬೆನ್ನಿಗೆ ನಿಂತಿದೆ.
ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಕುರಬ, ಮುಸ್ಲಿಂ ಜೊತೆಗೆ ಹಿಂದುಳಿದ ಮತಗಳು ನಿರ್ಣಾಯಕವಾಗಿವೆ. ಈ ಮತಗಳನ್ನು ಸೆಳೆಯಲು ಶಿವರಾಜ ತಂಗಡಗಿ ಭರ್ಜರಿ ಪ್ಲ್ಯಾನ್ ರೂಪಿಸಿದ್ದು, ಅಹಿಂದ ಮತಗಳಿಗೆ ಗಾಳ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಅಹಿಂದ ಮತಗಳು ಚದುರದಂತೆ ಯೋಜಿಸಿದ್ದಾರೆ. ಕುರುಬ ಸಮುದಾಯದ ಮತಗಳನ್ನ ಸೆಳೆಯಲು ಶಿವರಾಜ ತಂಗಡಗಿ ಸದಾ ಸಿದ್ದರಾಮಯ್ಯ ಜಪ ಮಾಡುತ್ತಿದ್ದಾರೆ. ಅಲ್ದೆ, ಕೆಲವೇ ದಿನಗಳ ಹಿಂದಷ್ಟೇ ಸಿದ್ದರಾಮಯ್ಯ ಜೀವನಚರಿತ್ರೆ ಆಧಾರಿತ ಸಿನಿಮಾ ಮಾಡಲು ಸಹ ಮುಂದಾಗಿದ್ರು. ಇವೆಲ್ಲವೂ ಕ್ಷೇತ್ರದಲ್ಲಿರೋ ಕುರುಬ ಸಮುದಾಯದ ಮತಗಳನ್ನ ಹಿಡಿದಿಟ್ಟುಕೊಳ್ಳಲು ಮಾಡಿದ್ದ ಪ್ಲ್ಯಾನ್ ಅಂತಾ ರಾಜಕೀಯ ಪಂಡಿತರು ವಿಶ್ಲೇಷಿಸಿದ್ರು. ಇದರ ಜೊತೆಗೆ ಕನಕಗಿರಿ ಕ್ಷೇತ್ರದಲ್ಲಿ ಶಿವರಾಜ ತಂಗಡಗಿ ಗೆದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಂಗಡಗಿ ಮತ್ತೊಮ್ಮೆ ಸಚಿವರಾಗ್ತಾರೆ ಅನ್ನೋ ಮಾತು ಕ್ಷೇತ್ರದಲ್ಲಿ ಪ್ರಚಲಿತವಾಗಿದ್ದು ಶಿವರಾಜ ತಂಗಡಗಿ ಪರ ಮತದಾರರು ಒಲವು ತೋರುತ್ತಿದ್ದಾರೆ.
ಕನಕಗಿರಿ ಕ್ಷೇತ್ರದಲ್ಲಿ ಬಿಟಿವಿ ನಡೆಸಿರೋ ಮೆಗಾ ಸರ್ವೆಯ ಸದ್ಯದ ಟ್ರೆಂಡ್ ಪ್ರಕಾರ ಇಲ್ಲಿ ಮಾಜಿ ಶಾಸಕ ಶಿವರಾಜ ತಂಗಡಗಿ ಭರ್ಜರಿ ಗೆಲುವು ಸಾಧಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಇದನ್ನೂ ಓದಿ : ದೆಹಲಿ ಸೇರಿ ದೇಶದ ಹಲವೆಡೆ ಪ್ರಬಲ ಭೂಕಂಪ… ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆ ದಾಖಲು…