ಕೊಪ್ಪಳ : ಭತ್ತದ ಕಣಜ ಅಂತಾ ಕರೆಸಿಕೊಳ್ಳೋ ಗಂಗಾವತಿಯಲ್ಲಿ ಕನ್ನಡ ಮಾತನಾಡೋರಿಗಿಂತಾ ತೆಲುಗು ಭಾಷಿಕರೇ ಹೆಚ್ಚು. ಕನ್ನಡದಂತೆಯೇ ತೆಲುಗು ಕೂಡ ಇಲ್ಲಿ ಚಲಾವಣೆಯಲ್ಲಿದೆ. ಇಂತಾ ಕ್ಷೇತ್ರ ಹಲವು ದಶಕಗಳ ಕಾಲ ಕಾಂಗ್ರೆಸ್ನ ಭದ್ರಕೋಟೆ ಅಂತಲೇ ಕರೆಸಿಕೊಂಡಿತ್ತು. ಕೆಲವು ಬಾರಿ ಇಲ್ಲಿ ಜನತಾ ಪರಿವಾರದ ಅಭ್ಯರ್ಥಿಗಳು ಗೆದ್ದಿದ್ದಾರೆ. 2004ರಲ್ಲಿ ಜೆಡಿಎಸ್ನ ಇಕ್ಬಾಲ್ ಅನ್ಸಾರಿ ಗೆದ್ದಿದ್ರು. 2008ರಲ್ಲಿ ಬಿಜೆಪಿಯ ಪರಣ್ಣ ಮುನವಳ್ಳಿ ಗೆದ್ದಿದ್ರು. 2013ರಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿದ್ದ ಇಕ್ಬಾಲ್ ಅನ್ಸಾರಿ ಮತ್ತೆ ಗೆದ್ದಿದ್ರು. ಇಂತಾ ಇಕ್ಬಾಲ್ ಅನ್ಸಾರಿ 2018ರ ವೇಳೆಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ರು. ಆಗ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಯ ಪರಣ್ಣ ಮುನವಳ್ಳಿ ಗೆದ್ದಿದ್ರು. ಜೆಡಿಎಸ್ನಿಂದ ಸ್ಪರ್ಧಿಸಿದ್ದ ಕರಿಯಣ್ಣ ಸಂಗಟಿ ಇಕ್ಬಾಲ್ ಅನ್ಸಾರಿ ಗೆಲುವಿಗೆ ತಡೆಯೊಡ್ಡಿದ್ರು. ಇಂತಾ 2018ರ ಚುನಾವಣೆ ಫಲಿತಾಂಶ ನೋಡೋದಾದ್ರೆ.
2018ರ ಚುನಾವಣೆ ಫಲಿತಾಂಶ
ಪರಣ್ಣ ಮುನವಳ್ಳಿ(ಬಿಜೆಪಿ) – 67,617
ಇಕ್ಬಾಲ್ ಅನ್ಸಾರಿ(ಕಾಂಗ್ರೆಸ್) – 59,644
ಗೆಲುವಿನ ಅಂತರ – 7,973
ಬಿಜೆಪಿಯಿಂದ ಸ್ಪರ್ಧಿಸಿದ್ದ ಪರಣ್ಣ ಮುನವಳ್ಳಿ 67 ಸಾವಿರದ 617 ಮತಗಳನ್ನ ಪಡೆದ್ರೆ, ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಇಕ್ಬಾಲ್ ಅನ್ಸಾರಿ 59 ಸಾವಿರದ 644 ಮತಗಳನ್ನ ಪಡೆದಿದ್ರು. ಈ ಮೂಲಕ 7 ಸಾವಿರದ 973 ಮತಗಳ ಅಂತರದಲ್ಲಿ ಬಿಜೆಪಿಯ ಪರಣ್ಣ ಮುನವಳ್ಳಿ ಗೆದ್ದು ಬೀಗಿದ್ರು.
ಧರ್ಮಾಧಾರಿತ ರಾಜಕಾರಣವೇ ಡ್ರೈವರ್ ಸೀಟ್ನಲ್ಲಿರೋ ಗಂಗಾವತಿ ಕ್ಷೇತ್ರದಲ್ಲಿ ಸಂಘ ಪರಿವಾರ ಬಿಗಿ ಹಿಡಿತ ಹೊಂದಿದೆ. ಸಂಘ ಪರಿವಾರ ಬಿಜೆಪಿಯ ಸಂಘಟನೆಯ ಬೆನ್ನೆಲುಬಾಗಿ ನಿಂತಿದೆ. ಇಂತಾ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಹೇಗಿದೆ ಅನ್ನೋದನ್ನ ನೋಡೋದಾದ್ರೆ,
ಗಂಗಾವತಿ ಜಾತಿ ಸಮೀಕರಣ
ಲಿಂಗಾಯತ – 40,000
ಮುಸ್ಲಿಂ – 27,000
ಕುರುಬ – 25,000
ಪರಿಶಿಷ್ಟ ಜಾತಿ – 22,000
ಪರಿಶಿಷ್ಟ ಪಂಗಡ – 20,000
ಇತರ – 59,000
ಗಂಗಾವತಿ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ 40 ಸಾವಿರ ಮತದಾರರಿದ್ದು ಇವರು ಬಿಜೆಪಿ ಮತ ಬ್ಯಾಂಕ್ ಆಗಿದ್ದಾರೆ. ಮುಸ್ಲಿಂ ಸಮುದಾಯದ 27 ಸಾವಿರ ಮತದಾರರು ಇಕ್ಬಾಲ್ ಅನ್ಸಾರಿ ಬೆಂಬಲಕ್ಕೆ ನಿಂತಿದ್ದಾರೆ. ಕುರುಬ ಸಮುದಾಯದ 25 ಸಾವಿರ ಮತದಾರರು ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿರೋದ್ರಿಂದ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಪರಿಶಿಷ್ಟ ಜಾತಿಯ 22 ಸಾವಿರ ಮತದಾರರಿದ್ದು ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಬೆಂಬಲಿಸಿಕೊಂಡು ಬರ್ತಿದ್ದಾರೆ. ಪರಿಶಿಷ್ಟ ಪಂಗಡದ 20 ಸಾವಿರ ಮತದಾರರು ಬಿಜೆಪಿ ಪರ ಒಲವು ಹೊಂದಿದ್ದಾರೆ. ಇತರ ಸಮುದಾಯಗಳ 59 ಸಾವಿರ ಮತದಾರರಿದ್ದು, ಅಭ್ಯರ್ಥಿಯ ಸೋಲು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಇವರು ಯಾರಿಗೆ ಮತ ನೀಡ್ತಾರೋ ಅವರಿಗೆ ಇಲ್ಲಿ ಗೆಲ್ಲುವ ಚಾನ್ಸ್ ಜಾಸ್ತಿ ಇದೆ.
ಗಂಗಾವತಿಯ ಹಾಲಿ ಶಾಸಕ ಪರಣ್ಣ ಮುನವಳ್ಳಿ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ರೂ, ಜನರ ಕೈಗೆ ಸಿಗಲ್ಲ ಅನ್ನೋ ಆರೋಪ ಎದುರಾಗಿದ್ದು ಮತದಾರರು ಪರಣ್ಣ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಎಲ್ಲಕ್ಕಿಂತಾ ಮುಖ್ಯವಾಗಿ ಶಾಸಕ ಪರಣ್ಣ ಮುನವಳ್ಳಿ ಕಾರ್ಯಕರ್ತರನ್ನ ವಿಶ್ವಾಸ ತೆಗೆದುಕೊಳ್ಳದೇ ಅವರನ್ನ ಕಡೆಗಣಿಸುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಿದೆ. ಜೊತೆಗೆ ಎಲ್ಲ ಅನುದಾನಕ್ಕೂ ಕಮಿಷನ್ ಫಿಕ್ಸ್ ಮಾಡಿದ್ದಾರೆ ಅನ್ನೋ ಭ್ರಷ್ಟಾಚಾರದ ಆರೋಪ ಅವರಿಗೆ ಮುಳುವಾಗೋ ಸಾಧ್ಯತೆಗಳು ಹೆಚ್ಚಾಗಿವೆ. ಇವೆಲ್ಲವೂ ಸಂಘ ಪರಿವಾರದ ನಾಯಕರ ಗಮನಕ್ಕೂ ಬಂದಿದ್ದು, ಇದು ಪರಣ್ಣಗೆ ಕುತ್ತು ತರೋ ಸಾಧ್ಯತೆ ಇದೆ.
ಯಾವಾಗ ಪರಣ್ಣ ಮುನವಳ್ಳಿ ವಿರುದ್ಧ ಸಂಘ ಪರಿವಾರದ ನಾಯಕರು ಅಸಮಾಧಾನಗೊಂಡಿದ್ದಾರೆ ಅಂತಾ ಗೊತ್ತಾಯ್ತೋ.. ತಕ್ಷಣವೇ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಲು ಚೆನ್ನಕೇಶವ ಮತ್ತು ವಿರೂಪಾಕ್ಷಪ್ಪ ಸಿಂಗನಾಳ ಪೈಪೋಟಿ ನಡೆಸುತ್ತಿದ್ದಾರೆ. ಚೆನ್ನಕೇಶವ ಅವರು ಈಗಾಗಲೇ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದು, ಪರಣ್ಣಗೆ ಈ ಬಾರಿ ಟಿಕೆಟ್ ಸಿಗಲ್ಲ ತಮಗೆ ಬಿಜೆಪಿ ಟಿಕೆಟ್ ಸಿಗುತ್ತೆ ಅನ್ನೋ ವಿಶ್ವಾಸದಲ್ಲಿದ್ದಾರೆ. ಮತ್ತೊಂದೆಡೆ ಮತ್ತೊಬ್ಬ ಆಕಾಂಕ್ಷಿ ವಿರೂಪಾಕ್ಷಪ್ಪ ಸಿಂಗನಾಳ ಕೂಡ ಪ್ರಚಾರದಲ್ಲಿ ತೊಡಗಿದ್ರು. ಆದ್ರೆ, ಪದೇಪದೆ ಜನಾರ್ದನ ರೆಡ್ಡಿ ಜೊತೆ ಗುರುತಿಸಿಕೊಳ್ಳುತ್ತಿದ್ದು, ಇದು ಅವರಿಗೆ ಮುಳುವಾಗೋ ಸಾಧ್ಯತೆ ಇದೆ.
ಬಿಜೆಪಿಯಿಂದ ಎಂಎಲ್ಸಿಯಾಗಿದ್ದ ಜನಾರ್ದನ ರೆಡ್ಡಿ, ತಮ್ಮ ವಿರುದ್ಧ ಕೇಳಿ ಬಂದಿದ್ದ ಅಕ್ರಮ ಗಣಗಾರಿಕೆ ಆರೋಪದ ಬಳಿಕ ಸಕ್ರಿಯ ರಾಜಕಾರಣದಿಂದ ದೂರ ಇದ್ರು. ಈಗ ಆ ಕಳಂಕಗಳು ದೂರವಾಗಿದ್ದು, ಸಕ್ರಿಯ ರಾಜಕಾರಣಕ್ಕೆ ಮರಳಿದ್ದಾರೆ. ಸಕ್ರಿಯ ರಾಜಕಾರಣಕ್ಕೆ ಮರಳಿದ್ರೂ, ಬಿಜೆಪಿ ನಾಯಕರು ಜನಾರ್ದನ ರೆಡ್ಡಿಯನ್ನ ಕಡೆಗಣಿಸಿದ್ರು. ಇದ್ರಿಂದ ಕುದ್ದು ಹೋದ ಜನಾರ್ದನ ರೆಡ್ಡಿ ಕರ್ನಾಟಕ ರಾಜ್ಯ ಪ್ರಗತಿ ಪಕ್ಷ ಅಂತಾ ತಮ್ಮದೇ ಹೊಸ ಪಕ್ಷವನ್ನ ಕಟ್ಟಿದ್ದು, ತಾವು ಗಂಗಾವತಿಯಿಂದ ಕಣಕ್ಕೆ ಇಳಿಯೋದಾಗಿ ಪ್ರಕಟಿಸಿದ್ದಾರೆ. ಇದರ ಭಾಗವಾಗಿ ಈಗಾಗಲೇ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಕೈಗೊಂಡು ಜನರ ಮನವೊಲಿಸಲು ಮುಂದಾಗಿದ್ದಾರೆ.
ಬಳ್ಳಾರಿಗೆ ಅಂಟಿಕೊಂಡಂತಿರೋ ಕೊಪ್ಪಳ ಜಿಲ್ಲೆಯಲ್ಲಿ ಜನಾರ್ದನ ರೆಡ್ಡಿ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಇದೇ ಕಾರಣಕ್ಕೆ ಅವರು ಗಂಗಾವತಿಯಿಂದ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ. ಗಂಗಾವತಿಯಲ್ಲಿ ಬಿಜೆಪಿ ತನ್ನದೇ ಆದ ಮತದಾರರನ್ನ ಹೊಂದಿದೆ. ಇವರಲ್ಲಿ ಬಹುತೇಕರು ಜನಾರ್ದನ ರೆಡ್ಡಿ ಪರ ಒಲವು ಹೊಂದಿದ್ದಾರೆ. ಇಂತವರನ್ನ ತಮ್ಮೆಡೆಗೆ ಸೆಳೆಯಲು ರೆಡ್ಡಿ ಪ್ಲ್ಯಾನ್ ಮಾಡಿದ್ದು, ಇವರ ಜೊತೆಗೆ ಮುಸ್ಲಿಂ ಮತದಾರರನ್ನ ಓಲೈಸಲು ಸಹ ಮುಂದಾಗಿದ್ದಾರೆ. ಈ ಮೂಲಕ ಗಂಗಾವತಿಯಲ್ಲಿ ತಮ್ಮದೇ ಆದ ರಣತಂತ್ರ ರೂಪಿಸಿದ್ದು, ತೆಲುಗು ಭಾಷಿಕರ ಮತಗಳನ್ನ ಸೆಳೆದು ಗೆಲ್ಲಲು ಸ್ಕೆಚ್ ಹಾಕಿದ್ದಾರೆ.
ಬಿಜೆಪಿ, ಜನಾರ್ದನ ರೆಡ್ಡಿ ಕಥೆ ಇದಾದ್ರೆ, ಅತ್ತ ಕಾಂಗ್ರೆಸ್ನಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಆದ್ರೆ, ಮಾಜಿ ಶಾಸಕ ಇಕ್ಬಾಲ್ ಅನ್ಸಾರಿಗೆ ಈಗಾಗಲೇ ಟಿಕೆಟ್ ಫಿಕ್ಸ್ ಆದಂತೆ ಕಾಣ್ತಿದೆ. ಯಾಕಂದ್ರೆ, ತಿಂಗಳ ಹಿಂದಷ್ಟೇ ಕೊಪ್ಪಳಕ್ಕೆ ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಕ್ಬಾಲ್ ಅನ್ಸಾರಿಗೆ ಈ ಬಾರಿ ನಿಮ್ಮ ಮತಗಳನ್ನ ನೀಡಿ ಅಂತಾ ಹೇಳೋ ಮೂಲಕ ಅನ್ಸಾರಿಗೆ ಟಿಕೆಟ್ ಘೋಷಣೆ ಮಾಡಿದ್ರು. ಆದ್ರೆ, ಇಕ್ಬಾಲ್ ಅನ್ಸಾರಿ ಬದಲು ತಮಗೆ ಟಿಕೆಟ್ ನೀಡಬೇಕು ಅಂತಾ ಮಾಜಿ ಎಂಎಲ್ಸಿ ಎಚ್.ಆರ್ಶ್ರೀನಾಥ್ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರ ನಡುವೆ ಇಲ್ಲಿ ಯಾರೇ ಸ್ಪರ್ಧಿಸಲಿ ಈ ಬಾರಿ ಗೆಲುವು ನಂದೇ ಅಂತಾ ಇಕ್ಬಾಲ್ ಅನ್ಸಾರಿ ಘೋಷಿಸಿದ್ದಾರೆ.
ಕಾಂಗ್ರೆಸ್ ಇಲ್ಲಿ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ನೀಡಿದ್ರೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಅಂದ್ರೆ, ಬಿಜೆಪಿ-ಕಾಂಗ್ರೆಸ್-ಜನಾರ್ದನ ರೆಡ್ಡಿ ವಿರುದ್ಧ ಇಲ್ಲಿ ಸ್ಪರ್ಧೆ ಏರ್ಪಡಲಿದೆ. ಒಂದು ವೇಳೆ ಇಕ್ಬಾಲ್ ಅನ್ಸಾರಿ ಬದಲಿಗೆ ಬೇರೆಯವರಿಗೆ ಟಿಕೆಟ್ ನೀಡಿದ್ರೆ, ಇಕ್ಬಾಲ್ ಅನ್ಸಾರಿ ಜೆಡಿಎಸ್ ಅಥವಾ ಪಕ್ಷೇತರರಾಗಿ ಕಣಕ್ಕಿಳಿಯೋದು ಪಕ್ಕಾ ಅಂತಾ ಹೇಳಿದ್ದಾರೆ. ಹೀಗೇನಾದ್ರೂ ಆದಲ್ಲಿ ಚತುಷ್ಕೋನ ಸ್ಪರ್ಧೆಗೆ ಗಂಗಾವತಿ ಸಾಕ್ಷಿಯಾಗಲಿದೆ ಅನ್ನೋದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.
ಇಡೀ ರಾಜ್ಯದ ಗಮನ ಸೆಳೆದಿರೋ ಗಂಗಾವತಿ ಕ್ಷೇತ್ರದಲ್ಲಿ ಬಿಟಿವಿ ನಡೆಸಿರೋ ಮೆಗಾ ಸರ್ವೆಯ ಸದ್ಯದ ಟ್ರೆಂಡ್ ಪ್ರಕಾರ ಇಲ್ಲಿ ಕಾಂಗ್ರೆಸ್ನ ಇಕ್ಬಾಲ್ ಅನ್ಸಾರಿ ಅಥವಾ ಜನಾರ್ದನ ರೆಡ್ಡಿ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ.
ಇದನ್ನೂ ಓದಿ : ದೆಹಲಿ ಸೇರಿ ದೇಶದ ಹಲವೆಡೆ ಪ್ರಬಲ ಭೂಕಂಪ… ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆ ದಾಖಲು…