ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಸಮಸ್ಯೆಯ ವಿಷಯಕ್ಕೆ ಬಂದ್ರೆ ರಕ್ತದ ಒತ್ತಡ ಹಾಗೂ ಸಕ್ಕರೆ ಕಾಯಿಲೆ ಅನ್ನೋದು ಕಾಮನ್ ಆಗಿ ಬಿಟ್ಟಿದೆ. ಇವೆರಡೂ ಕೂಡ ಸೈಲೆಂಟ್ ಕಿಲ್ಲರ್ ಅಂದ್ರೂ ತಪ್ಪಾಗಲಾರದು. ಕೆಲವೊಮ್ಮೆ ಯಾವುದೇ ಮುನ್ಸೂಚನೆಗಳನ್ನು ನೀಡದೇ ಕಾಡುವ ಈ ಎರಡು ಕಾಯಿಲೆಗಳ ಬಗ್ಗೆ ಎಷ್ಟು ಜಾಗರೂಕತೆ ವಹಿಸಿದರೂ ಕಡಿಮೆ ಅಂತಾನೇ ಹೇಳಬಹುದು.
ಈಗಿನ ಬ್ಯುಸಿ ಲೈಫ್ , ಅಸಮರ್ಪಕ ಆಹಾರ ಪದಾರ್ಥಗಳ ಸೇವನೆಯಿಂದಾಗಿ, ಇಂದಲ್ಲಾ ನಾಳೆ ರಕ್ತದ ಒತ್ತಡ ಬರಬಹುದು ಎಂಬ ಭಯ ಎಲ್ಲರಿಗೂ ಕಾಡುತ್ತಾ ಇರುತ್ತೆ. ಅದರಲ್ಲೂ ಮಧ್ಯವಯಸ್ಸು ದಾಟಿದವರು ಹಾಗೂ ಒತ್ತಡದ ಜಂಜಾಟದಲ್ಲಿ ದುಡಿಯುವ ಯುವಜನತೆ ಪ್ರತಿ ತಿಂಗಳು ರಕ್ತದ ಒತ್ತಡದ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಡಾಕ್ಟರ್ ಹೇಳುತ್ತಾರೆ. ಯಾಕೆಂದರೆ ಒಂದು ವೇಳೆ ವ್ಯಕ್ತಿಯ ಆರೋಗ್ಯದಲ್ಲಿ ಈ ರಕ್ತದ ಒತ್ತಡ ಹೆಚ್ಚಾದಂತೆ, ಮುಂದಿನ ದಿನಗಳಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಗಳು ಒಂದರ ಹಿಂದೆ ಒಂದು ಕಾಡುವ ಅಪಾಯ ಹೆಚ್ಚಿರುತ್ತದೆ. ಬಿಪಿಯನ್ನು ಕಂಟ್ರೋಲ್ ಮಾಡಬೇಕೆಂದ್ರೆ ಈ ಜ್ಯೂಸ್ಗಳನ್ನ ಸೇವಿಸಿ ನೋಡಿ..
ದಾಳಿಂಬೆ ಜ್ಯೂಸ್ : ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು, ದಿನಾ ಒಂದು ಲೋಟ ದಾಳಿಂಬೆ ಜ್ಯೂಸ್‌ನ್ನು ಕುಡಿಯುವುದರಿಂದ, ಈ ಕಾಯಿಲೆಯನ್ನು ನಿಯಂತ್ರಿಸಬಹುದಾಗಿದೆ. ಈ ಹಣ್ಣಿನ ಬೀಜಗಳಲ್ಲಿ, ರಕ್ತ ಸಂಚಾರ ವನ್ನು ದೇಹದ ನರನಾಡಿಗಳಿಗೆ, ಯಾವುದೇ ಅಡೆತಡೆಗಳಿಲ್ಲದೆ, ಪೂರೈಸಲು ಅಗತ್ಯವಾಗಿ ಬೇಕಾಗಿರುವ ವಿಟಮಿನ್ ಗಳು, ಖನಿಜಾಂಶಗಳು, ಕರಗುವ ನಾರಿನಾಂಶ, ಅದರಲ್ಲೂ ವಿಶೇಷವಾಗಿ ಪೊಟ್ಯಾಷಿಯಂ ಅಂಶಗಳು ಹೇರಳವಾಗಿ ಸಿಗುವುದರಿಂದ, ಈ ಹಣ್ಣಿನ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.
ಕಿತ್ತಳೆ ಹಣ್ಣಿನ ಜ್ಯೂಸ್ : ವಿಟಮಿನ್ ಸಿ, ಪೊಟ್ಯಾಶಿಯಂ ಅಂಶದ ಜೊತೆಗೆ ಫೋಲೆಟ್ ಅಂಶ ಕೂಡ ಯಥೇಚ್ಛವಾಗಿ ಕಂಡು ಬರುವುದರಿಂದ, ನಿಯಮಿತವಾಗಿ ಈ ಹಣ್ಣಿನ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಅಧಿಕ ರಕ್ತದ ಒತ್ತಡ ನೈಸರ್ಗಿಕವಾಗಿ ನಿಯಂತ್ರಿಸಲು ಸಹಕಾರಿಯಾಗಲಿದೆ. ಅಷ್ಟೇ ಅಲ್ಲದೇ ಆರೋಗ್ಯ ಸಮಸ್ಯೆಯನ್ನು ದೂರ ಮಾಡುತ್ತದೆ.
ಬೀಟ್ ರೂಟ್ ಜ್ಯೂಸ್ : ಬೀಟ್ ರೂಟ್ ಅನ್ನು ಹೆಚ್ಚಿನವರ ಇಷ್ಟಪಡೋದಿಲ್ಲ.. ಆದ್ರೆ ಇದರಲ್ಲಿ ಅಧಿಕ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಹೊಂದಿರುವ ಈ ತರಕಾರಿ ರಕ್ತದ ಒತ್ತಡಕ್ಕೆ ಸುಲಭವಾದ ಪರಿಹಾರವನ್ನು ಒದಗಿಸುತ್ತದೆ. ಈ ತರಕಾರಿಯನ್ನು ಪ್ರತಿದಿನ ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ರಕ್ತದ ಒತ್ತಡವನ್ನು ಕಡಿಮೆ ಮಾಡಿ ಸಾಧಾರಣ ಮಟ್ಟಕ್ಕೆ ತಲುಪುವಂತೆ ಮಾಡುತ್ತದೆ.
ಅನಾನಸ್ ಹಣ್ಣಿನ ಜ್ಯೂಸ್ : ಅನಾನಸ್ ಹಣ್ಣಿನಲ್ಲಿ ಸೋಡಿಯಂ ಹಾಗೂ ಪೊಟ್ಯಾಷಿಯಂ ಅಂಶದ ಪ್ರಮಾಣ ಹೇರಳ ವಾಗಿ ಕಂಡು ಬರುವುದರಿಂದ, ದೇಹದ ರಕ್ತದ ಒತ್ತಡವನ್ನು ಕಡಿಮೆ ಮಾಡಿ ಸಾಧಾರಣ ಮಟ್ಟಕ್ಕೆ ತಲುಪುವಂತೆ ಮಾಡಲು ಹೆಚ್ಚು ಸಹಾಯಕವಾಗುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದವರು ಆಗಾಗ ಅನಾನಸ್ ಹಣ್ಣಿನ ಜ್ಯೂಸ್ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳುವುದು ಒಳ್ಳೆಯದು.