ಚಿತ್ರದುರ್ಗ: ಹೊಸದುರ್ಗದಲ್ಲಿ ಬಿಜೆಪಿ ಮುಖಂಡರ ನಡುವೆ ಭಿನ್ನಮತ ಸ್ಫೋಟಗೊಂಡಿದ್ದು, 2023ರ ವಿಧಾನಸಭೆ ಚುನಾವಣೆಯ ಟಿಕೆಟ್ ವಿಚಾರವಾಗಿ ಹಾಲಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತು ಬಿಜೆಪಿ ಮುಖಂಡ ಎಸ್. ಲಿಂಗಮೂರ್ತಿ ನಡುವೆ ಫೈಟ್ ನಡೆಯುತ್ತಿದೆ.
ಇಂದು ಚಿತ್ರದುರ್ಗದಲ್ಲಿ ಮಾತನಾಡಿದ ಖನಿಜ ನಿಗಮ ಅಧ್ಯಕ್ಷ ಎಸ್.ಲಿಂಗಮೂರ್ತಿ ’ನಾನು 2023ರ ಚುನಾವಣೆಯಲ್ಲಿ ಹೊಸದುರ್ಗ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. 2008 ಮತ್ತು 2013 ರ ಚುನಾವಣೆಯಲ್ಲಿ ಇಲ್ಲಿಂದ ಸ್ಪರ್ಧಿಸಿ ಸೋಲು ಕಂಡಿದ್ದೇನೆ. 2018 ರಲ್ಲಿ ಮತ್ತೆ ನನಗೆ ಬಿಜೆಪಿಯಿಂದ ಸ್ಪರ್ಧಿಸುವ ಅವಕಾಶವಿತ್ತು. ಆದರೆ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಬೇಕೆಂಬ ದೃಷ್ಟಿಯಿಂದ ಟಿಕೆಟ್ ತ್ಯಾಗ ಮಾಡಿದ್ದೆ.
ಗೂಳಿಹಟ್ಟಿ ಶೇಖರ್ ಅವರಿಗೆ ಬಿಜೆಪಿ ಟಿಕೆಟ್ ತ್ಯಾಗ ಮಾಡಿದ್ದೆ, ನಾನೇ ಬಿಜೆಪಿ ಅಭ್ಯರ್ಥಿ ಎಂಬಂತೆ ಕೆಲಸ ಮಾಡಿ ಬಿಜೆಪಿಯನ್ನು ಗೆಲ್ಲಿಸಿದ್ದೆವು. ನಮ್ಮ ಬೆಂಬಲದಿಂದ ಗೆದ್ದ ಬಳಿಕ ಶಾಸಕರಿಂದ ನಮ್ಮ ಕಡೆಗಣನೆಯಾಗಿದೆ. ಇದೀಗ ನಾನು 2023 ಕ್ಕೆ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಆಗಿದ್ದೇನೆ. ಶಾಸಕರಾದ ಗೂಳಿಹಟ್ಟಿ ಶೇಖರ್ ಅವರು ಹತಾಶರಾಗಿ ಅವಮಾನಿಸುವ ಮಾತನಾಡುತ್ತಿದ್ದಾರೆ. ಕ್ಷೇತ್ರದ ಜನತೆ ನೋಡುತ್ತಾರೆ, ದೇವರು ನೋಡಿಕೊಳ್ಳುತ್ತಾನೆ ಎಂದು ಲಿಂಗಮೂರ್ತಿ ತಿಳಿಸಿದ್ದಾರೆ.