ಪಾಟ್ನಾ: ಬಿಹಾರದಲ್ಲಿ ಅಗ್ನಿಪಥ್ ಯೋಜನೆ (Agnipath Scheme) ವಿರೋಧಿ ಪ್ರತಿಭಟನೆ ತೀವ್ರಗೊಂಡಿದ್ದು ಪ್ರತಿಭಟನಾಕಾರರು ಬಿಜೆಪಿಯ 2 ಕಚೇರಿಗಳಿಗೆ ಬೆಂಕಿ ಹಚ್ಚಿದ್ದು, ಹಲವು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.
ಬಿಹಾರ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಮುಖಂಡರ ನಿವಾಸ, ಕಚೇರಿಗಳ ಮೇಲೆ ಪ್ರತಿಭಟನಾಕಾರರು ಅಟ್ಯಾಕ್ ಮಾಡಲು ಯತ್ನಿಸಿದ್ದಾರೆ. ಬಿಜೆಪಿ ಮುಖಂಡರ ಕಚೇರಿ, ನಿವಾಸವನ್ನೇ ಗುರಿಯಾಗಿಸಿಕೊಂಡು ಪ್ರತಿಭಟನೆ ನಡೆಸ್ತಿದ್ದಾರೆ. ಬಿಹಾರದ ಮಧೇಪುರದಲ್ಲಿನ ಬಿಜೆಪಿ ಮುಖಂಡನ ಕಚೇರಿ ಮೇಲೆ 500ಕ್ಕೂ ಹೆಚ್ಚು ಪ್ರತಿಭಟನಾಕಾರರು ದಾಳಿ ಮಾಡಲು ಯತ್ನಿಸಿದ್ದಾರೆ.
ಇನ್ನು ಗುರುವಾರ ಬಿಹಾರದ ನಾವಡಾದಲ್ಲಿರುವ ಬಿಜೆಪಿ ಕಚೇರಿ (BJP Office)ಗೆ ಬೆಂಕಿ ಹಚ್ಚಲಾಗಿತ್ತು. ಇಂದು ಮಧೇಪುರದಲ್ಲಿ ಮತ್ತೊಂದು ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಬಿಹಾರದಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದ್ದು, ಪೊಲೀಸರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರನ್ನು ಬಂಧಿಸುತ್ತಿದ್ದಾರೆ. ಅರಾ ರೈಲು ನಿಲ್ದಾಣದ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ 16 ಜನರನ್ನು ಬಂಧಿಸಿದ್ದರೆ, 650 ಜನರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.