ಬೆಳಗಾವಿ: ಕೊರೋನಾ ಮೂರನೇ ಅಲೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾಗಿ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ. ಆದರೆ ಬೆಳಗಾವಿಯಲ್ಲಿ ಬಿಜೆಪಿ ಶಾಸಕರೊಬ್ಬರೇ ಕೊರೋನಾ ರೂಲ್ಸ್ ಗಳನ್ನು ಗಾಳಿಗೆ ತೂರಿ ಎಮ್ಮೆ, ಕೋಣ ಓಡಿಸುವ ಸ್ಪರ್ಧೆಗೆ ಚಾಲನೆ ನೀಡಿದ್ದಾರೆ.
ಇದನ್ನೂ ಓದಿ: ಸಂಕ್ರಾಂತಿಯಂದೇ ರಾಜ್ಯಕ್ಕೆ ಬ್ಯಾಡ್ ನ್ಯೂಸ್… ಕೇಸ್ ಏರಿಕೆ ಜೊತೆಗೆ ಆಸ್ಪತ್ರೆ ಸೇರುವವರ ಸಂಖ್ಯೆಯೂ ಹೆಚ್ಚಳ…
ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ನಿನ್ನೆ ಬೆಳಗಾವಿಯ ಚವ್ಹಾಟ್ ಗಲ್ಲಿಯಲ್ಲಿ ಎಮ್ಮೆ, ಕೋಣ ಓಡಿಸುವ ಸ್ಪರ್ಧೆಗೆ ಚಾಲನೆ ನೀಡಿದರು. ಎಮ್ಮೆ, ಕೋಣ ಓಡುವ ಸ್ಪರ್ಧೆಯನ್ನು ವೀಕ್ಷಿಸಲು ನೂರಾರು ಜನರು ನೆರೆದಿದ್ದರು. ಬಹುತೇಕರು ಮಾಸ್ಕ್ ಧರಿಸಿರಲಿಲ್ಲ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಿಲ್ಲ. ಈ ಮೂಲಕ ಕಾನೂನು ಪಾಲನೆ ಮಾಡಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಕಾನೂನನ್ನು ಬ್ರೇಕ್ ಮಾಡಿದ್ದಾರೆ.
ಇದೇ ವೇಳೆ ಬೆಳಗಾವಿಯಲ್ಲಿ ಈಗಾಗಲೇ ಕೊರೋಆ ಸೋಂಕಿತರ ಸಂಖ್ಯೆ ಮಿತಿಮೀರಿದೆ. ಇದರ ನಡುವೆ ಇಂತಹ ಸ್ಪರ್ಧೆಗಳನ್ನು ಆಯೋಜಿಸಿದರೆ, ಕೊರೋನಾ ಸೋಂಕು ಮತ್ತಷ್ಟು ಹರಡುವುದಿಲ್ಲವೇ. ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಆಯೋಜಿಸಿದಾಗ, ಕೊರೋನಾ ಸೋಂಕು ಹಬ್ಬುತ್ತೆ ಎಂದು ಕಾಂಗ್ರೆಸ್ ನಾಯಕರ ಮೇಲೆ ಕೇಸ್ ಹಾಕಲಾಗಿತ್ತು. ಈಗ ಆಡಳಿತ ಪಕ್ಷದ ಶಾಸಕರ ಅನಿಲ್ ಬೆನಕೆ ವಿರುದ್ಧವೂ ಎಫ್ ಐ ಆರ್ ಹಾಕ್ತೀರಾ? ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೀರಾ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.