ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅವರ ಉತ್ತರಾಧಿಕಾರಿಯಾಗಿ ಸಿಎಂ ಹುದ್ದೆಗೇರಿರುವ ಬಸವರಾಜ ಬೊಮ್ಮಾಯಿ ಅವರಿಗೆ ಆರಂಭದಿಂದಲೂ ಬಂಡಾಯದ ಬಿಸಿ ತಗಲುತ್ತಿದೆ. ಅದರಲ್ಲೂ ಮೂವರು ಬಿಜೆಪಿ ಶಾಸಕರು ಸುಗಮವಾಗಿ ಆಡಳಿತ ನಡೆಸಲು ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಅವರು ಸಿಡಿಮಿಡಿಗೊಂಡಿದ್ದು, ಅವರ ವಿರುದ್ಧ ಪಕ್ಷದ ಹೈಕಮಾಂಡ್ ಗೆ ದೂರು ನೀಡಲು ಮುಂದಾಗಿದ್ದಾರೆ.
ಖಾತೆ ಹಂಚಿಕೆಯಾದ ದಿನದಿಂದಲೂ ಸಚಿವ ಆನಂದ್ ಸಿಂಗ್ ಅವರು ಖಾತೆ ಬದಲಾವಣೇ ಕುರಿತು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದಾಗಿ ಸರ್ಕಾರದ ಇಮೇಜ್ ಗೆ ಡ್ಯಾಮೇಜ್ ಆಗುತ್ತಿದೆ. ಹಾಗಾಗಿ ಆನಂದ್ ಸಿಂಗ್ ಗೆ ನೀವೇ ಬಿಸಿ ಮುಟ್ಟಿಸಿ ಎಂದು ಹೈಕಮಾಂಡ್ ಗೆ ದೂರು ನೀಡಲು ಬೊಮ್ಮಾಯಿ ಅವರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಸಿಡಿ ಕೇಸ್ ನಿಂದಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿ ಹೊಳಿ ಮತ್ತೆ ಸಚಿವರಾಗಲು ಪ್ರಯತ್ನ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದಲ್ಲಿರುವ ಭಿನ್ನಮತೀಯರನ್ನು ಒಗ್ಗೂಡಿಸಲು ಜಾರಕಿಹೊಳಿ ಪ್ರಯತ್ನಿಸುತ್ತಿದ್ದಾರೆ. ಇವರ ಜೊತೆಯಲ್ಲೇ ಬಿಎಸ್ ವೈ ಸರ್ಕಾರ ರಚನೆಯಾಗಲು ಮತ್ತು ಬಿಎಸ್ ವೈ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿ.ಪಿ. ಯೋಗೀಶ್ವರ್ ಸಹ ತಮಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕಾಗಿ ಗರಂ ಆಗಿದ್ದಾರೆ. ಹಾಗಾಗಿ ಯೋಗೀಶ್ವರ್ ಸಹ ಬೊಮ್ಮಾಯಿ ವಿರುದ್ಧ ಅಸಮಾಧಾನಗೊಂಡಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಕುತ್ತು ತರಲು ಪ್ಲ್ಯಾನ್ ರೂಪಿಸುತ್ತಿದ್ದಾರೆ. ಹಾಗಾಗಿ ರಮೇಶ್ ಜಾರಕಿಹೊಳಿ, ಸಿ.ಪಿ. ಯೋಗೀಶ್ವರ್ ಮತ್ತು ಅನಂದ್ ಸಿಂಗ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಹೈಕಮಾಂಡ್ ಗೆ ದೂರು ನೀಡಲು ಬೊಮ್ಮಾಯಿ ಮುಂದಾಗಿದ್ದಾರೆ.