ಬೆಂಗಳೂರು: ಎಸಿಬಿ ರೇಡ್ ವಿಚಾರವಾಗಿ ಸದ್ದು ಮಾಡಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಸಂಗಪ್ಪ ಅವರನ್ನು ನೂತನ ಡಿಸಿಯಾಗಿ ನೇಮಕ ಮಾಡಿದೆ.
ಮಂಜುನಾಥ್ ರನ್ನು ಇಂಟಿಗ್ರೇಟೆಡ್ ಚೈಲ್ಡ್ ಪ್ರೊಟೆಕ್ಷನ್ ಸ್ಕೀಂ ಡೈರೆಕ್ಟರ್ ಆಗಿ ವರ್ಗಾವಣೆ ಮಾಡಿದ್ದರೆ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿದ್ದ ಸಂಗಪ್ಪ ಅವರನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾಗಿ ನೇಮಿಸಲಾಗಿದೆ.
ಡಿಸಿ ಕೋರ್ಟ್ನಲ್ಲಿ ಆರ್ಡರ್ಸ್ ಮಾಡಲು ಲಂಚ ಪಡೆದ ಆರೋಪದ ಹಿನ್ನೆಲೆ ಉಪ ತಹಶೀಲ್ದಾರ್ ಮಹೇಶ್, ಕ್ಲರ್ಕ್ ಚಂದ್ರು ಅರೆಸ್ಟ್ ಆಗಿದ್ದರು. ಮಂಜುನಾಥ್ ಪ್ರಕರಣದ 3ನೇ ಆರೋಪಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ನಿನ್ನೆ ಮಂಜುನಾಥ್ ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು. ಇದರ ಬೆನ್ನಲ್ಲೇ ಈಗ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.