ಬೆಂಗಳೂರು: ರಾಜ್ಯದ ಎಲ್ಲಾ ಪಿಯು ಕಾಲೇಜುಗಳಲ್ಲಿ ಜನವರಿ 1ರಿಂದ ಫೆಬ್ರವರಿ 7ರವರೆಗೆ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಹಮ್ಮಿಕೊಳ್ಳಲು ಪದವಿಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.
75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಶಿಕ್ಷಣ ಇಲಾಖೆ ಸೂಚನೆ ಹಿನ್ನೆಲೆಯಲ್ಲಿ ಈ ಆದೇಶ ಮಾಡಿದ್ದು, ಜನವರಿ 26ರಂದು ‘ಸಂಗೀತದೊಂದಿಗೆ ಸೂರ್ಯ ನಮಸ್ಕಾರಕ್ಕೂ ಸೂಚನೆ ನೀಡಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಬಳಿಕ ಕಾರ್ಯಕ್ರಮದ ಮಾಹಿತಿಯನ್ನು ಇಲಾಖೆಯ ಶೈಕ್ಷಣಿಕ ಶಾಖೆಗೆ ಸಲ್ಲಿಸಬೇಕು ಎಂದು ಎಲ್ಲ ಜಿಲ್ಲಾ ಉಪ ನಿರ್ದೇಶಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಕೇಂದ್ರದ ಪತ್ರದಲ್ಲಿ ಏನಿದೆ…?
75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವಕ್ಕಾಗಿ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, 30 ರಾಜ್ಯಗಳಲ್ಲಿ 30 ಸಾವಿರ ಸಂಸ್ಥೆಗಳ 3 ಲಕ್ಷ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. 75 ಕೋಟಿ ಸೂರ್ಯ ನಮಸ್ಕಾರ ಮಾಡಿಸಲು ಯೋಗಾ ಫೆಡರೇಷನ್ ನಿರ್ಧಾರ ಮಾಡಿದ್ದು, ಜ 26ರ ಗಣರಾಜ್ಯೋತ್ಸವದಂದು ಸಂಗೀತದೊಂದಿಗೆ ಸೂರ್ಯ ನಮಸ್ಕಾರ ಮಾಡಲಾಗುತ್ತದೆ. ಸೂರ್ಯ ನಮಸ್ಕಾರವು ಯೋಗಾಸನದ 10 ಭಂಗಿ ಒಳಗೊಂಡಿದ್ದು, ವಿದ್ಯಾರ್ಥಿಗಳ ಆರೋಗ್ಯ ವೃದ್ದಿ, ಮನೋಬಲ ಹೆಚ್ಚಿಸಲು ಸೂರ್ಯ ನಮಸ್ಕಾರ ಮಾಡಿಸಲಾಗುತ್ತಿದೆ. ಜನವರಿ 1ರಿಂದ ಫೆ. 7ರವರೆಗಿನ ಒಟ್ಟು 38 ದಿನಗಳ ಪೈಕಿ 21 ದಿನ ಸೂರ್ಯ ನಮಸ್ಕಾರ ಮಾಡಿಸಲಾಗುತ್ತದೆ. ಪ್ರತಿ ದಿನ 13 ಸೂರ್ಯ ನಮಸ್ಕಾರಗಳಂತೆ ಒಟ್ಟು 273 ಸೂರ್ಯ ನಮಸ್ಕಾರ ವಿದ್ಯಾರ್ಥಿಗಳು ಮಾಡಲಿದ್ದಾರೆ. ಸೂರ್ಯ ನಮಸ್ಕಾರ ಮಾಡಿದವರಿಗೆ ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್ನಿಂದ ಇ–ಪ್ರಮಾಣಪತ್ರ ಸಿಗಲಿದೆ.