ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ದಾಳಿ ವೇಳೆ ಕಂದಾಯ ಇಲಾಖೆಯ ಅಧಿಕಾರಿ ಮಧುಸೂದನ್ ಅವರ ಮನೆಯಲ್ಲಿ ಕೆಜಿ ಕೆಜಿ ಚಿನ್ನ ಪತ್ತೆಯಾಗಿದೆ.
ಬೆಂಗಳೂರಿನ ಕಂದಾಯ ಭವನದ ಆಯುಕ್ತರ ಕಚೇರಿಯಲ್ಲಿ ಸಹಾಯಕ ಮಹಾನಿರೀಕ್ಷಕ (ಆಡಿಟ್)ರಾಗಿ ಕಾರ್ಯನಿರ್ವಹಿಸುತ್ತಿರುವ ಮಧುಸೂದನ್ ಅವರ ಬೆಂಗಳೂರಿನ ರಾಜಾಜಿನಗರದಲ್ಲಿರುವ ಮನೆಯ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಮಧುಸೂದನ್ ಮನೆಯಲ್ಲಿ 2.3 ಕೆ.ಜಿ. ಚಿನ್ನ, 4.9 ಕೆ.ಜಿ. ಬೆಳ್ಳಿ, 39 ಲಕ್ಷ ರೂ. ನಗದು ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳು ಮಧುಸೂದನ್ ಅವರ ಮನೆ ಮತ್ತು ಕಚೇರಿಗಳ ಮೇಲೂ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ನೆಕ್ಲೆಸ್, ಚಿನ್ನದ ಸರ, ಡಾಬು, ಉಂಗುರ, ಬೈತಲೆ ಬೊಟ್ಟು, ಓಲೆ, ಚಿನ್ನದ ಬಳೆ, ಬೆಳ್ಳಿ ದೀಪ, ಬೆಳ್ಳಿ ಚೆಂಬು, ಬೆಳ್ಳಿ ತಟ್ಟೆ ಮತ್ತು ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ.