ವಾಷಿಂಗ್ಟನ್ : 1708ರಲ್ಲಿ ಮುಳುಗಿದ್ದ ನೌಕೆಯಲ್ಲಿ ರಾಶಿ ರಾಶಿ ಚಿನ್ನ ಪತ್ತೆಯಾಗಿದೆ. ಈ ಚಿನ್ನದ ಮೌಲ್ಯ 1.3 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. 300 ವರ್ಷಗಳ ಹಿಂದೆ ಕೊಲಂಬಿಯಾದ ಕರಾವಳಿ ಕಾರ್ಟಜೆನಾ ಬಳಿ ಬ್ರಿಟಿಷರು ಮುಳುಗಿಸಿದ್ದ ಸ್ಪೇನ್ ಹಡಗಿನ ಅವಶೇಷಗಳನ್ನು ಕೊಲಂಬಿಯಾ ಸೇನೆ ಪತ್ತೆ ಮಾಡಿ ಫೋಟೋ ರಿಲೀಸ್ ಮಾಡಿದೆ.
ಈ ಹಡಗಿನಲ್ಲಿರುವ ಸಂಪತ್ತಿಗಾಗಿ ಕೊಲಂಬಿಯಾ, ಸ್ಪೇನ್ ಹಾಗೂ ಬೊಲಿವಿಯಾ ನಡುವೆ ಜಟಾಪಟಿ ನಡೆಯುತ್ತಿದೆ. ರಿಮೋಟ್‌ನಿಂದ ಕಾರ್ಯನಿರ್ವಹಿಸುವ 4 ಸಾಧನಗಳನ್ನು ಸಮುದ್ರದ 3100 ಅಡಿ ಆಳಕ್ಕೆ ಕಳುಹಿಸಿ ಈ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ. 2015ರಲ್ಲೇ ಹಡುಗು ಪತ್ತೆ ಸುದ್ದಿ ಹರಡಿತ್ತು. ಚಿನ್ನದ ತುಣುಕುಗಳು, ಗಾಜಿನ ಬಾಟಲಿಗಳು, ಪಿಂಗಾಣಿ ವಸ್ತುಗಳು ವೈರಲ್ ಆಗಿರೋ ಫೋಟೋಗಳಲ್ಲಿ ಕಂಡುಬಂದಿವೆ. ‘ಸ್ಯಾನ್ ಓಸೆ ಗ್ಯಾಲಿಯನ್’ ಹಡಗು ಸ್ಪೇನ್ ರಾಜಮನೆತನಕ್ಕೆ ಸೇರಿದ್ದಾಗಿದ್ದು, 1708ರಲ್ಲಿ ಕೊಲಂಬಿಯಾದ ಕರಾವಳಿ ಕಾರ್ಟಜೆನಾ ಬಳಿ ಬ್ರಿಟಿಷರ ದಾಳಿಗೆ ಸಿಲುಕಿತ್ತು. 600 ಸಿಬ್ಬಂದಿ ಹಡಗಿನಲ್ಲಿದ್ದರು. ಇದ್ರಲ್ಲಿ ಕೆಲವರು ಮಾತ್ರ ಬದುಕುಳಿದಿದ್ದರು.